ಕೊರೋನಾ ವೈರಸ್ಸು ಬಹುತೇಕರ ಬದುಕನ್ನೇ ಬರ್ಬಾದಾಗಿಸಿದ್ದೀಗ ಕರಾಳ ಇತಿಹಾಸವಾಗಿ ದಾಖಲಾಗಿದೆ. ನಾನಾ ಕ್ಷೇತ್ರದಲ್ಲೂ ಕೂಡಾ ಇದಕ್ಕೆ ಬಲಿಬಿದ್ದ ದುರಂತಗಾಥೆಗಳು ದಂಡಿ ದಂಡಿಯಾಗಿವೆ. ಅದರಲ್ಲಿಯೂ, ಸಿನಿಮಾ ರಂಗದಲ್ಲಂತೂ ದುರಂತದ ಗಡಿ ದಾಟಿಕೊಂಡ ದಾರುಣ ಕಥೆಗಳಿದ್ದಾವೆ. ಅದೆಷ್ಟೋ ಸಿನಿಮಾಗಳು ಗೆಲ್ಲುವ ತಾಕತ್ತಿದ್ದರೂ, ಎದ್ದು ನಿಲ್ಲಲಾಗದೆ ಮರೆಯಾಗಿವೆ. ಅದೆಷ್ಟೋ ಸಿನಿಮಾಗಳು ಬಿಡುಗಡೆಯ ಭಾಗ್ಯ ಕಾಣದೆ ಕಂಗಾಲಾಗಿವೆ. ಗೆಲ್ಲಬಲ್ಲ ಎಲ್ಲ ಲಕ್ಷಣಗಳಿದ್ದರೂ ಕೂಡಾ ವಿಧಿಯಾಟಕ್ಕೆ ಸಿಕ್ಕು, ಮರೆಗೆ ಸರಿಯುವ ಸಂಕಟವಿದೆಯಲ್ಲಾ? ಅದನ್ನು ಒಂದು ಹಂತದಲ್ಲಿ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿದ್ದ `ಕೊಡೆಮುರುಗ’ ಚಿತ್ರತಂಡ ಸರಿಯಾಗಿಯೇ ಅರಿತುಕೊಂಡಿತ್ತು. ಕೊರೋನಾ ಅಬ್ಬರದಿಂದಲೇ ಚಿತ್ರಮಂದಿರಗಳಿಂದ ಮರೆಯಾಗಿದ್ದ ಈ ಚಿತ್ರ ಪ್ರೇಕ್ಷಕರ ಮನಸಲ್ಲುಳಿದಿದೆ. ಅದು ನಿಜವಾದ ಸಾರ್ಥಕ್ಯ!
ಕೊಡೆಮುರುಗ ಚಿತ್ರದ ಬಗ್ಗೆ ಈಗ ಏಕಾಏಕಿ ಪ್ರಸ್ತಾಪಿಸುತ್ತಿರೋದಕ್ಕೆ ಬಲವಾದ ಕಾರಣವಿದೆ. ಆ ಚಿತ್ರದ ಚೆಂದದ ವೀಡಿಯೋ ಸಾಂಗ್ ಇದೀಗ ಆನಂದ್ ಆಡಿಯೋ ಮೂಲಕ ಬಿಡುಗಡೆಗೊಂಡಿದೆ. ಅದಕ್ಕೆ ಸಿಗುತ್ತಿರುವ ವೀಕ್ಷಣೆ ಮತ್ತು ಭರಪೂರ ಪ್ರತಿಕ್ರಿಯೆಗಳ ಪ್ರಭೆಯಲ್ಲಿ ಕೊಡೆಮುರುಗ ಮತ್ತೊಮ್ಮೆ ಪ್ರೇಕ್ಷಕರ ಮೈ ಮನಸುಗಳನ್ನು ಆವರಿಸಿಕೊಂಡಿದ್ದಾನೆ. ಹೀಗೆ ಅನಿವಾರ್ಯತೆಗಳ ಸುಳಿಗೆ ಸಿಕ್ಕು ಮರೆಯಾಗಿದ್ದ ಚಿತ್ರವೊಂದು, ಅಚ್ಚರಿದಾಯಕವಾಗಿ ಮತ್ತೆ ಸುದ್ದಿ ಕೇಂದ್ರಕ್ಕೆ ಬರುವುದು, ಆ ಸಿನಿಮಾ ಬಗ್ಗೆ ಪ್ರೇಕ್ಷಕರೇ ಚರ್ಚೆ ಮಾಡುವುದೆಲ್ಲವೂ ವಿಶೇಷ ವಿದ್ಯಮಾನ. ಅದನ್ನು ಕೊಡೆಮುರುಗ ಚಿತ್ರ ಸಾಧ್ಯವಾಗಿಸಿದೆ. ಈ ಸಮ್ಮೋಹಕವಾದ ಹಾಡಿನ ಭೂಮಿಕೆಯಲ್ಲಿಯೇ ಈ ಸಿನಿಮಾ ಬಗೆಗಿನ ಮಹತ್ವದ ಅಂಶಗಳೂ ಜಾಹೀರಾಗಿವೆ!
ಮೊದಲಿಗೆ ಈ ಗ ಹೊರ ಬಂದಿರುವ ಹಾಡಿನ ಬಗ್ಗೆ ಹೇಳುವುದಾದರೆ, ಅದು ಈ ಸಿನಿಮಾ ನಿರ್ದೇಶಕ ಕಂ ಹೀರೋ ಸುಬ್ರಮಣ್ಯ ಪ್ರಸಾದ್ ಅವರ ಕನಸಿನ ಕೂಸು. ನಿಮಗೆ ಸುಬ್ರಮಣ್ಯ ಪ್ರಸಾದ್ ಹೀರೋ ಅಂದಾಕ್ಷಣ ಅವರು ಈ ಸಿನಿಮಾ ನಿರ್ದೇಶಕರಲ್ಲವಾ ಅಂತೊಂದು ಪ್ರಶ್ನೆ ಮೂಡಿಕೊಳ್ಳಬಹುದು. ಒಂದು ವೇಳೆ ನೀವು ಈ ಚಿತ್ರವನ್ನು ನೋಡಿದವರಾಗಿದ್ದರೆ ಆವಾಗಲೇ ಈ ರಹಸ್ಯ ನಿಮಗೆ ಗೊತ್ತಾಗಿರುತ್ತೆ. ಅಷ್ಟಕ್ಕೂ ಈ ಸಿನಿಮಾದ ನಿಜವಾದ ಹೀರೋ ಸುಬ್ರಮಣ್ಯ ಪ್ರಸಾದ್. ಅದೆಂಥಾ ಹಿಂಜರಿಕೆಯಿತ್ತೋ, ಅನಿವಾರ್ಯತೆ ಇತ್ತೋ ಗೊತ್ತಿಲ್ಲ; ಸುಬ್ರಮಣ್ಯ ಪ್ರಸಾದ್, ತಾನು ಕೊಡೆಮುರುಗ ಚಿತ್ರದ ಹೀರೋ ಆಗಿದ್ದರೂ ಕೂಡಾ, ಅದನ್ನು ಯಾವ ಹಂತದಲ್ಲಿಯೂ ರಿವೀಲ್ ಮಾಡಿರಲಿಲ್ಲ. ಆದರೆ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಕೂಡಾ ಅವರ ಪಾತ್ರದ ಹೀರೋಗಿರಿ ತಾಕಿತ್ತು. ಅವರೇ ನಿಜವಾದ ಹೀರೋ ಅಂತ ಜನ ಮಾತಾಡಿಕೊಂಡಿದ್ದರು. ಅದು ಸುಬ್ರಮಣ್ಯ ಪ್ರಸಾದ್ ಅವರ ಶ್ರಮ, ಪಡಿಪಾಟಲುಗಳಿಗೆ ಸಿಕ್ಕ ಮಹಾನ್ ಸನ್ಮಾನ!
ಸುಬ್ರಮಣ್ಯ ಪ್ರಸಾದ್ ಕಿರುತೆರೆ, ಹಿರಿತೆರೆ ಸೇರಿದಂತೆ ಬಣ್ಣದ ಜಗತ್ತಿನ ನಾನಾ ಮಗ್ಗುಲುಗಳನ್ನು ಕಂಡವರು. ಅದರ ಭಾಗವಾಗಿ ದುಡಿದವರು. ಸಾಮಾನ್ಯವಾಗಿ, ಅದೆಷ್ಟೇ ಪಳಗಿಕೊಂಡಿದ್ದರೂ ಕೂಡಾ ಅಖಾಡಕ್ಕಿಳಿದಾಗ ಚಿತ್ರರಂಗ ನಾನಾ ಥರದ ಪಾಠ ಮಾಡುತ್ತೆ. ಕೊಡೆಮುರುಗ ಚಿತ್ರದ ಸಂದರ್ಭದಲ್ಲಿ ಅಂಥಾ ಎಲ್ಲ ಪಾಠಗಳನ್ನೂ ಕೂಡಾ ಸುಬ್ರಮಣ್ಯ ಪ್ರಸಾದ್ ಮನದಟ್ಟು ಮಾಡಿಕೊಂಡಿದ್ದಾರೆ. ಅಸಲಿಗೆ ಕೊಡೆಮುರುಗ ಗೆಲ್ಲುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದ ಚಿತ್ರ. ಸುಬ್ರಮಣ್ಯ ಸಿದ್ಧ ಸೂತ್ರಗಳಾಚೆಗೆ, ಮನೋರಂಜನೆಯನ್ನೇ ಮುಖ್ಯವಾಗಿಟ್ಟುಕೊಂಡು ಗಂಭೀರ ಕಥೆ ಹೇಳಿದ್ದರು. ಜೊತೆಗೆ ಆ ಸಿನಿಮಾದಲ್ಲಿ ನಿರ್ದೇಶಕನ ಪಾತ್ರದಲ್ಲಿ ಹೀರೋ ಆಗಿ ನಟಿಸಿದ್ದರು. ನೋಡಿದ ಎಲ್ಲರೂ ಥ್ರಿಲ್ ಆಗಿ ಈ ಸಿನಿಮಾವನ್ನು ಒಪ್ಪಿಕೊಂಡಿದ್ದರು.
ಆದರೆ, ಅದೇಕೋ ಕೊರೋನಾ ಆಘಾತದಿಂಣದ ಕೊಡೆಮುರುಗ ತತ್ತರಿಸಿತ್ತು. ಇನ್ನೇನು ಟೇಕಾಫ್ ಆಗಬೇಕೆಂಬಷ್ಟರಲ್ಲಿ, ಬಿಡುಗಡೆಯಾದ ಮೂರೇ ದಿನಕ್ಕೆ ಲಾಕ್ಡೌನ್ ಹೇರಿಕೆಯಾದದ್ದರಿಂದ ಸಿನಿಮಾ ಮಂದಿರಗಳಿಂದ ಹೊರ ನಡೆಯಬೇಕಾಗಿ ಬಂದಿತ್ತು. ಅದಾಗಿ ವರ್ಷ ಕಳೆದ ಮೇಲೆ ಇತ್ತೀಚೆಗೆ ಮರು ಬಿಡುಗಡೆ ಮಾಡಿದರೂ ಹತ್ತಾರು ಕಾರಣಗಳಿಂದ ಮತ್ತೆ ಜನರನ್ನು ತಲುಪೋದು ಕೊಂಚ ಕಷ್ಟವಾಗಿತ್ತು. ಇದೆಲ್ಲದರಾಚೆಗೆ ಒಳ್ಳೆ ಚಿತ್ರವಾಗಿ ಗುರುತಿಸಿಕೊಂಡಿದ್ದ ಕೊಡೆಮುರುಗ, ಇದೀಗ ಹುಡುಕಾಡು ಅಲೆದಾಡು ಎಂಬ ಭರವಸೆ ತುಂಬುವ ಹಾಡಿನ ಮೂಲಕ ಮತ್ತೆ ಸದ್ದು ಮಾಡುತ್ತಿದೆ.
ಈ ವಿಶೇಷವಾದ ಹಾಡಿನಲ್ಲಿ ಕೊಡೆಮುರುಗ ಚಿತ್ರದ ಅಸಲೀ ಹೀರೋ ಸುಬ್ರಮಣ್ಯ ಪ್ರಸಾದ್ ನಟಿಸಿದ್ದಾರೆ. ಅವರ ನಟನೆಯ ಪ್ರತೀ ಚಹರೆಗಳಲ್ಲಿಯೂ ಹೀರೋಗಿರಿಯ ಗುಣ ಲಕ್ಷಣಗಳು ತೊನೆದಾಡುತ್ತಿವೆ. ಆ ಹಾಡನ್ನು ಖುದ್ದು ಸುಬ್ರಮಣ್ಯ ಅವರೇ ಸಾಹಿತ್ಯ ಬರೆದು ರೂಪಿಸಿದ್ದಾರೆ. ಸೋಲಿನ ಕಮರಿಯಿಂದ ಮೇಲೆದ್ದು, ಗುರಿಗಾಗಿ ಸಜ್ಜುಗೊಳಿಸುವ ತಾಕತ್ತಿರುವ ಈ ಹಾಡು, ಸಾಹಿತ್ಯ, ಸಂಗೀತ, ಮೇಕಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆಯುತ್ತದೆ. ಈ ಹಾಡಿನ ಮೂಲಕ ಸುಬ್ರಮಣ್ಯ ಪ್ರಸಾದ್ ಅಕ್ಷರಶಃ ಹೀರೋ ಆಗಿ ಮಿಂಚಿದ್ದಾರೆ. ಇದಕ್ಕೀಗ ವ್ಯಾಪಕ ಮೆಚ್ಚುಗೆ, ಲಕ್ಷ ಲಕ್ಷ ವೀಕ್ಷಣೆಗಳು ಸಿಗುತ್ತಿವೆ. ಇದೇ ಖುಷಿಯಲ್ಲಿ ಕೊಡೆಮುರುಗ ನಿರ್ದೇಶಕ ಕಂ ಹೀರೋ ಸುಬ್ರಮಣ್ಯ ಪ್ರಸಾದ್ ಹೊಸಾ ಕನಸಿನತ್ತ ಹೊರಳಿಕೊಂಡಿದ್ದಾರೆ. ಅದರ ಬಗೆಗಿನ ಮಾಹಿತಿಗಳು ಶೀಘ್ರದಲ್ಲಿಯೇ ಜಾಹೀರಾಗಲಿವೆ!