ಗಾಂಜಾ ಮುಂತಾದ ನಶೆಯ ಪದಾರ್ಥಗಳಿಂದು ಇಡೀ ದೇಶವನ್ನೇ ವ್ಯಾಪಿಸಿವೆ. ನಮ್ಮ ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಇಂಥಾ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕುವ ಅವಿರತ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಸಂದಿಗೊಂದಿಗಳಲ್ಲಿ ಪಿತಗುಡುತ್ತಿರುವ ಡ್ರಗ್ ಪೆಡ್ಲರ್‍ಗಳು ಸಿಕ್ಕಿಕೊಳ್ಳುತ್ತಿದ್ದಾರೇ ಹೊರತು, ಕಿಂಗ್‍ಪಿನ್‍ಗಳನ್ನು ಬಂಧಿಸಿ ಈ ದಂಧೆಯ ನಡ ಮುರಿಯುವ ಉತ್ಸಾಹವನ್ನು ಪೊಲೀಸರು ತೋರುತ್ತಿಲ್ಲವೆಂಬ ಅಸಹನೆ ನಾಗರಿಕರಲ್ಲಿದೆ. ಈ ನಡುವೆ ಹೈದ್ರಾಬಾದ್‍ನಲ್ಲಿ ಡ್ರಗ್ಸ್ ಮಾರಾಟಗಾರನೊಬ್ಬನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹೈದ್ರಾಬಾದ್‍ನ ಒಂದಷ್ಟು ಪ್ರದೇಶಗಳಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಈತನ ಮೇಲೆ ಹಲವಾರು ದಿನಗಳಿಂದ ಪೊಲೀಸರು ಕಣ್ಣಿಟ್ಟಿದ್ದರು. ಇದೀಗ ಮಾಲಿನ ಸಮೇತ ದಂಧೆಕೋರನನ್ನು ಬಂಧಿಸಲಾಗಿದೆ. ಈತನಿಂದ ಇಪ್ಪತ್ನಾಲಕ್ಕು ಕೇಜಿ ಗಾಂಜಾ ಮತ್ತುಯ ಹದಿನೈದು ಲಕ್ಷದಷ್ಟು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಭಾಶಗದಲ್ಲಿ ದೊಡ್ಡ ನೆಟ್‍ವರ್ಕ್ ಹೊಂದಿದ್ದ ಈ ಕ್ರಿಮಿಗೆ ವಿದ್ಯಾರ್ಥಿಗಳು, ಪ್ರತಿಷ್ಠಿತರು ಸೇರಿದಂತೆ ಅನೇಕರ ಸಂಪರ್ಕವಿದೆ. ಆತನ ಮಾಹಿತಿ ಆಧರಿಸಿ ಈ ದಂಧೆಯ ಬೇರುಗಳನ್ನು ಬುಡದಿಂದಲೇ ಕಿತ್ತು ಹಾಕಲು ಹೈದ್ರಾಬಾದ್ ಪೊಲೀಸರು ಮುಂದಾಗಿದ್ದಾರೆ.
ಸದ್ಯಕ್ಕೆ ಹೈದ್ರಾಬಾದ್ ಪಟ್ಟಣ ಡ್ರಗ್ಸ್ ದಂಧೆಯ ದಾವಾನಲದಂತಿದೆ. ಇಲ್ಲಿಯೇ ದಿನವೊಂದಕ್ಕೆ ಲಕ್ಷ, ಕೋಟಿಗಳ ವ್ಯವಹಾರವೂ ನಡೆಯುತ್ತಿದೆ ಎಂಬುದನ್ನೀಗ ಪೊಲೀಸರು ಪತ್ತೆಹಚ್ಚಿದ್ದಾರೆ. ತುಂಬಾ ಸಲೀಸಿನ ಹಾದಿಯಲ್ಲಿ ಗ್ರಾಹಕರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿರುವ ಒಂದು ದೊಡ್ಡ ನೆಟ್‍ವರ್ಕ್ ಹೈದ್ರಾಬಾದ್ ತುಂಬಾ ಹಬ್ಬಿಕೊಂಡಿದೆ. ಸದ್ಯಕ್ಕೆ ತಗುಲಿಕೊಂಡಿರುವಾತನನ್ನು ವ್ಯಾಪಕ ತನಿಖೆಗೀಡು ಮಾಡಲಾಗುತ್ತಿದೆ. ಆ ಮಾಹಿತಿಯನ್ನು ಆಧರಿಸಿ, ಯಾವ್ಯಾವ ಮೂಲದಿಂದ ನಗರದೊಳಗೆ ಡ್ರಗ್ಸ್ ಸರಬರಾಜಾಗುತ್ತಿದೆ ಎಂಬುದನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ ಖಾಕಿ ಪಡೆ ಪ್ರಯತ್ನಿಸುತ್ತಿದೆ.