ಅದೆಂಥಾದ್ದೇ ಪರಿಸ್ಥಿತಿ ಇದ್ದರೂ ಒಂದೊಳ್ಳೆ ಚಿತ್ರಕ್ಕೆ ಸಾಥ್ ಕೊಟ್ಟೇ ಕೊಡುತ್ತಾರೆಂಬುದು ಮತ್ತೊಮ್ಮೆ ಸಾಬೀತಾಗಿದೆ; ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ `ಹೊಂದಿಸಿ ಬರೆಯಿರಿ’ ಚಿತ್ರದ ಗೆಲುವಿನ ಮೂಲಕ. ಈ ಹಿಂದೆಯೂ ಕೂಡಾ ಪರಭಾಷಾ ಚಿತ್ರಗಳ ಹಾವಳಿ ಮತ್ತು ದೊಡ್ಡ ಸಿನಿಮಾಗಳ ಭರಾಟೆಗಳ ನಡುವೆಯೂ ಪ್ರೇಕ್ಷಕರು ಭಿನ್ನ ಕಥಾನಕದ ಸಿನಿಮಾಗಳನ್ನು ಬದುಕಿಸಿದ ಉದಾಹರಣೆಗಳಿದ್ದಾವೆ. ಆ ಸಾಲಿಗೀಗ ಹೊಂದಿಸಿ ಬರೆಯಿರಿ ಚಿತ್ರವೂ ಸೇರ್ಪಡೆಗೊಂಡಿದೆ. ಬಿಡುಗಡೆಯಾದ ಮೊದಲ ವಾರದಲ್ಲಿ ಬಂದೊದಗಿದ್ದ ಸ್ಥಿತಿ ಕಂಡು ಖುದ್ದು ಚಿತ್ರತಂಡ ಕಂಗಾಲಾಗಿತ್ತು. ಆದರೆ, ನಂತರದಲ್ಲಿ ಸಿನಿಮಾ ನೋಡಿದ ಮಂದಿಯ ಸದಭಿಪ್ರಾಯಗಳು ಬಾಯಿಂದ ಬಾಯಿಗೆ ಹಬ್ಬಿಕೊಂಡು, ಮನಸುಗಳನ್ನು ಆವರಿಸಿಕೊಂಡಿವೆ. ಅದುವೇ ಚಿತ್ರಮಂದಿರಗಳನ್ನು ತುಂಬಿಸಿ, ಇದೀಗ ಹೊಂದಿಸಿ ಬರೆಯಿರಿ ಚಿತ್ರ ಇಪ್ಪತೈದನೇ ದಿನದ ಸನಿಹದಲ್ಲಿದೆ!
ಫೆಬ್ರವರಿ ಹತ್ತರಂದು ಹೊಂದಿಸಿ ಬರೆಯಿರಿ ಬಿಡುಗಡೆಗೊಂಡಿತ್ತು. ಆ ಘಳಿಗೆಯಲ್ಲಿ ಚಿತ್ರತಂಡದಲ್ಲಿ ಬೇರೆಯದ್ದೇ ಥರದ ಭರವಸೆ ಇತ್ತು. ಯಾಕೆಂದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ತುಂಬಾನೇ ಹೊಸತೆನ್ನಿಸುವಂಥಾ, ಪ್ರಯೋಗಾತ್ಮಕ ಹಾದಿಯಲ್ಲಿ ಚಿತ್ರತಂಡ ಪ್ರಚಾರ ನಡೆಸಿತ್ತು. ಅದರಲ್ಲಿ ಅಡಗಿದ್ದ ಕ್ರಿಯಾಶೀಲತೆಯೂ ಬೆರಗು ಮೂಡಿಸಿದ್ದದ್ದು ಸುಳ್ಳಲ್ಲ. ಇದೆಲ್ಲದರ ಮೂಲಕ ಭಿನ್ನ ಸಿನಿಮಾವಾಗಿ ಬಿಂಬಿಸಿಕೊಂಡಿದ್ದ ಹೊಂದಿಸಿ ಬರೆಯಿರಿ, ದೊಡ್ಡ ಮಟ್ಟದಲ್ಲಿ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆಯಿತ್ತು. ಆದರೆ, ಅದೇಕೋ ಅದು ಪೂರ್ಣ ಪ್ರಮಾಣದಲ್ಲಿ ನಿಜವಾಗಿರಲಿಲ್ಲ. ಆ ನಂತರ ಒಂದರ ಹಿಂದೊಂದರಂತೆ ಈ ಸಿನಿಮಾಕ್ಕೆ ಸವಾಲುಗಳೇ ಎದುರಾಗಿದ್ದವು.
ಹಾಗಂತ, ಸಿನಿಮಾ ಬಗ್ಗೆ ಕ್ರೇಜ್ ಕಡಿಮೆ ಆಗಿತ್ತೆಂದು ಅಂದುಕೊಳ್ಳುವಂತಿಲ್ಲ. ಈ ಮೂರು ವಾರಗಳಲ್ಲಿ ಬಿಡುಗಡೆಗೊಂಡಿದ್ದ ಸಿನಿಮಾಗಳ ಸಂಖ್ಯೆಯಿದೆಯಲ್ಲಾ? ಅದು ಹೊಂದಿಸಿ ಬರೆಯಿರಿ ಚಿತ್ರಕ್ಕೆ ಶೋಗಳು ಸಿಗದಂತೆ ಮಾಡಿ ಹಾಕಿತ್ತು. ಮೋದಲ ವಾರ ಎಪ್ಪತ್ತು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿದ್ದ ಈ ಚಿತ್ರಕ್ಕೆ ಒಂದು ವಾರ ಮಗುಚಿಕೊಳ್ಳುವ ಹೊತ್ತಿಗೆಲ್ಲ ಉಳಿದುಕೊಂಡಿದ್ದದ್ದು ಒಂದೇ ಒಂದು ಥಿಯೇಟರ್ ಮಾತ್ರ. ನೋಡಿದ ಮಂದಿಯೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆ ಮಾತುಗಳನ್ನಾಡುತ್ತಿದ್ದರೂ, ಪ್ರೇಕ್ಷಕ ವಲಯವೆಲ್ಲ ಥ್ರಿಲ್ ಆಗಿದ್ದರೂ ಕೂಡಾ ಶೋಗಳು ಸಿಗದಿದ್ದರೆ ಚಿತ್ರತಂಡದ ಸ್ಥಿತಿ ಹೇಗಾಗಿರಬೇಡ?
ಇಷ್ಟಾದರೂ ಕಂಟೆಂಟಿನ ಮೇಲೆ ಭರವಸೆ ಮತ್ತು ಪ್ರೇಕ್ಷಕರು ಕೈ ಬಿಡಲಾರರೆಂಬ ತುಂಬು ನಂಬಿಕೆಯೊಂದಿಗೆ ನಿರ್ಮಾಪಕ ಕಂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮುಂದುವರೆದಿದ್ದರು. ಸರಿಸುಮಾರು ಮೂವತ್ತರಷ್ಟು ಸಿನಿಮಾಗಳು ಬಿಡುಗಡೆಗೊಂಡು, ಈ ಚಿತ್ರಕ್ಕೆ ಶೋಗಳು ಸಿಗದಿದ್ದಾಗ ಕಂಗಾಲಾದ ಅವರು, ವಿತರಕರೊಂದಿಗೆ ಮಾತಾಡಿ ಹೇಗಾದರೂ ಒಂದಷ್ಟು ಶೋಗಳನ್ನು ಕೊಡುವಂತೆ ಮನವೊಲಿಸಿದ್ದರು. ಒಂದು ವೇಳೆ ಪ್ರೇಕ್ಷಕರು ಕಿಕ್ಕಿರಿಯದಿದ್ದರೆ ಕ್ಯಾನ್ಸಲ್ ಮಾಡಿ ಅಂತಲೂ ಹೇಳಿದ್ದರು. ಅದರ ಫಲವಾಗಿಯೇ ಮಾರನೇ ವಾರದ ಶನಿವಾರದ ಹೊತ್ತಿಗೆಲ್ಲ ಹೊಂದಿಸಿ ಬರೆಯಿರಿ ಚಿತ್ರಕ್ಕೆ ಐದು ಶೋಗಳು ಸಿಕ್ಕಿದ್ದವು. ಅವೆಲ್ಲವೂ ಭರ್ತಿಯಾದದ್ದೇ, ಚಿತ್ರತಂಡಕ್ಕೆ ಹೋದ ಜೀವ ಬಂದಂತಾಗಿತ್ತು.
ಬಿಡುಗಡೆಯಾದ ದಿನದಿಂದಲೇ ಇಡೀ ಚಿತ್ರತಂಡ ಸಿನಿಮಾ ಮಂದಿರಗಳಿಗೆ ಎಡತಾಕಲಾರಂಭಿಸಿತ್ತು. ನೋಡಿದವರಲ್ಲಿ ಯಾರೊಬ್ಬರೂ ಮಿಶ್ರ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಪ್ರತಿಯೊಬ್ಬರದ್ದೂ ಸಿನಿಮಾ ಅದ್ಭುತವಾಗಿದೆ ಎಂಬ ಅಭಿಪ್ರಾಯವೇ ಆಗಿತ್ತು. ಜನ ಹೀಗೆ ಖುಷಿಗೊಂಡಿದ್ದರೂ ಶೋಗಳು ಸಿಗದ ದುರಂತವನ್ನು ಮೀರಿಕೊಂಡು ಮುಂದುವರೆದ ಫಲವಾಗಿಯೇ ಇದೀಗ ಈ ಚಿತ್ರಕ್ಕೆ ಹೆಚ್ಚೆಚ್ಚು ಸಿನಿಮಾ ಮಂದಿರಗಳು, ಶೋಗಳು ಸಿಗಲಾರಂಭಿಸಿವೆ. ಮೂವತ್ತರಷ್ಟು ಸಿನಿಮಾಗಳು ತೆರೆಗಂಡು ಎತ್ತಂಗಡಿಯಾಗುವ ಭಯದ ನಡುವೆಯೇ ಹೊಂದಿಸಿ ಬರೆಯಿರಿ ಕಾಲೂರಿ ನಿಂತಿದೆ. ಎರಡನೇ ಶನಿವಾರ ಮತ್ತು ಭಾನುವಾರ ಐದು ಶೋಗಳು ಹೌಸ್ ಫುಲ್ ಆಗುತ್ತಲೇ, ಶೋಗಳ ಸಂಖ್ಯೆ ಏರುಗತಿ ಕಂಡಿದೆ.
ಬಾಯಿಂದ ಬಾಯಿಗೆ ಹಬ್ಬಿಕೊಂಡ ಸದಭಿಪ್ರಾಯ, ಚಿತ್ರತಂಡದ ಭರವಸೆ ಮತ್ತು ಸಿನಿಮಾಸಕ್ತರ ಪ್ರೀತಿಯಿಂದಲೇ ಹೊಂದಿಸಿ ಬರೆಯಿರಿ ಚಿತ್ರ ಗೆದ್ದಿದೆ. ಇದೇ ಭಾನುವಾರ ಇಪ್ಪತೈದು ದಿನ ಪೂರೈಸಿಕೊಳ್ಳುವ ಸಂಭ್ರಮದಲ್ಲಿದೆ. ಇದರಿಂದ ಖುಷಿಗೊಂಡಿರುವ ಚಿತ್ರತಂಡ, ಜಿಲ್ಲೆ, ತಾಲೂಕು ಮಟ್ಟದಲ್ಲಿಯೂ ಸಿನಿಮಾವನ್ನು ನೆಲೆಗಾಣಿಸಲು ಸನ್ನದ್ಧವಾಗಿ ನಿಂತಿದೆ. ಈ ಸಿನಿಮಾ ಪಾಲಿಗೆ ಶನಿವಾರ ಮತ್ತು ಭಾನುವಾರದಂದು ಅಕ್ಷರಶಃ ಮ್ಯಾಜಿಕ್ಕು ನಡೆಯುತ್ತಿದೆ. ಮತ್ತೊಂದು ಕಡೆಯಿಂದ ಫ್ಯಾಮಿಲಿ ಪ್ರೇಕ್ಷಕರೂ ಹೆಚ್ಚು ಸಂಖ್ಯೆಯಲ್ಲಿ ದಾಪುಗಾಲಿಡುತ್ತಿರೋದರಿಂದ ಇಪ್ಪತೈದರ ಹೊಸ್ತಿಲಲ್ಲಿ ಹೊಂದಿಸಿ ಬರೆಯಿರಿ ಚಿತ್ರ ಲಕಲಕಿಸುತ್ತಿದೆ.
ಇದು ನಿಜಕ್ಕೂ ವೀರೋಚಿತ ಗೆಲುವು. ಅದರಲ್ಲಿ ಖಂಡಿತವಾಗಿಯೂ ಕನ್ನಡದ ಸಿನಿಮಾ ಪ್ರೇಮಿಗಳ ಪಾಲಿದೆ. ಕೊಂಚ ಯಾಮಾರಿದ್ದರೂ ಒಂದೊಳ್ಳೆ ಕಂಟೆಂಟು ಹೊಂದಿರುವ ಈ ಚಿತ್ರ ಕಾಲುಳಿತಕ್ಕೊಳಗಾಗಿ ಮರೆಗೆ ಸರಿಯುವ ಅಪಾಯವಿತ್ತು. ಆದರೀಗ ಅದನ್ನು ಯಶಸ್ವಿಯಾಗಿ ದಾಟಿಕೊಳ್ಳಲಾಗಿದೆ. ಈ ಚಿತ್ರವನ್ನು ರಾಮೇನಹಳ್ಳಿ ಜಗನ್ನಾಥ್ ಕಷ್ಟಪಟ್ಟು ರೂಪಿಸಿದ್ದಾರೆ. ನಿರ್ದೇಶನದೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೆಗಲಿಗೇರಿಸಿಕೊಂಡು ಒದ್ದಾಡಿದ್ದಾರೆ. ಕಡೆಗೆ ಸಿನಿಮಾ ತೆರೆ ಕಂಡ ನಂತರವೂ ನಿರಾಸೆಗಳನ್ನು ಕಂಡುಂಡಿದ್ದಾರೆ. ಇಂಥಾ ಕಡುಗಷ್ಟದ ಯಾನವೀಗ ಸಾರ್ಥಕ್ಯ ಕಂಡಿದೆ. ಯಾಕೆಂದರೆ, ಹೊಂದಿಸಿ ಬರೆಯಿರಿ ಚಿತ್ರ ಅಭೂತಪೂರ್ವವಾದ ಯಶಸ್ಸಿನತ್ತ ದಾಪುಗಾಲಿಡುತ್ತಿದೆ. ಇದಕ್ಕಿಂತಲೂ ಖುಷಿಯ ವಿಷಯ ಬೇರೇನಿದೆ?