ನಮ್ಮಲ್ಲಿ ಹೊಟ್ಟೆಗೆ ಹೆಚ್ಚಾಗಿ ನವರಂಧ್ರಗಳಲ್ಲಿಯೂ ಚಿಮ್ಮುವ ರೇಂಜಿಗೆ ಎಣ್ಣೆ (drinkers) ಹೊಡೆಯುವವರಿದ್ದಾರೆ. ಹಾಗೆ ಭರ್ಜರಿ ಕಿಕ್ಕೇರಿಸಿಕೊಂಡು ಫುಟ್ಪಾತು ಸರ್ವೆ ಮಾಡುವವರು, ಅಲ್ಲೇ ಬೋರಲಾಗಿ ಬಿದ್ದುಕೊಳ್ಳುವವರು, ಗಲ್ಲಿ ಗಟಾರ ಕೊಚ್ಚೆ ಕೊಳಕೆನ್ನದೆ ಉಳ್ಳಾಡುವವರೆಲ್ಲ ನಮಗೆ ಪರಿಚಿತರಾಗಿರ್ತಾರೆ. ಅಂಥಾ ಕುಡುಕರಿಗೆಲ್ಲ ಕಾಸಿಲ್ಲದ ಟೈಮಲ್ಲಿ ಎಣ್ಣೆಯೆಂಬುದು ಮಾಯೆಯಂತೆ ಕಾಡಿರುತ್ತೆ.
ಬರಿದಾದ ಜೇಬಲ್ಲಿ ಬಾಯಾರಿ ಕುಂತ ಪ್ರತೀ ಕುಡುಕರಿಗೂ ಹಗಲು ಹೊತ್ತಲ್ಲೇ ಪುಗಸಟ್ಟೆ ಎಣ್ಣೆಯ ಕನಸು ಬಿದ್ದಿರುತ್ತೆ. ಕಾಸಿಲ್ಲದಿದ್ದರೂ ಮೊಗೆ ಮೊಗೆದು ಮನಸಾರೆ ಕುಡಿಯುವಂಥಾ ವ್ಯವಸ್ಥೆ ಇರಬೇಕಿತ್ತೆಂದು ಹಲುಬಾಡುತ್ತಾರೆ. ನಮ್ಮ ದೇಶದ ಸಮಸ್ತ ಕುಡುಕರಿಗೆ ಬೀಳೋ ಆ ಕನಸು ಇಟಲಿ ದೇಶದಲ್ಲಿ ವಾಸ್ತವದ ಅವತಾರವೆತ್ತಿದೆ.
ಇಟಲಿಯ ಕ್ಯಾಲ್ಟಾರಿ ಡಿ ಒರ್ಟೋನಾ ಎಂಬಲ್ಲಿ ಕುಡುಕರ ಪಾಲಿನ ಸ್ವರ್ಗದಂಥಾ ತೀರ್ಥಕ್ಷೇತ್ರವೊಂದಿದೆ. ಅಲ್ಲಿ ರೆಡ್ ವೈನ್ ಕಾರಂಜಿಯಾಗಿ ಸದಾ ಚಿಮ್ಮುತ್ತಿರುತ್ತೆ. ದಿನದ ಇಪ್ಪತ್ನಾಲಕ್ಕು ಗಂಟೆ ನಿರಂತರವಾಗಿ ಚಿಮ್ಮೋ ಈ ವೈನನ್ನು ಜನ ಫ್ರೀಯಾಗಿಯೇ ಮೊಗೆದು ಕುಡಿಯುತ್ತಾರೆ. ಅಂದ ಹಾಗೆ ಈ ರೆಡ್ ವೈನಿನ ಪುಗಸಟ್ಟೆ ಕಾರಂಜಿ ದ್ರಾಕ್ಷಿ ತೋಟದ ನಡುವಲ್ಲಿದೆ. ನಮ್ಮ ದೇಶದಲ್ಲಿಯಾದರೆ ಅಂಥ ಸಾವಿರ ಕಾರಂಜಿಗಳಿದ್ರೂ ಕ್ಷಣಾರ್ಧದಲ್ಲಿಯೇ ಬರಿದಾಗಿಯಾವೇನೋ…