ಕೇವಲ ಕನ್ನಡ ಚಿತ್ರರಂಗದ ವಿಚಾರದಲ್ಲಿ ಮಾತ್ರವಲ್ಲ; ಸಾಹಿತ್ಯಕ ವಲಯದಲ್ಲಿಯೂ ಮಹತ್ವದ್ದಾಗಿ ಗುರುತಿಸಿಕೊಂಡಿರುವ ಚಿತ್ರ (maavu bevu) `ಮಾವು ಬೇವು’. ಒಂದು ಬಗೆಯ ಚಿತ್ರಗಳ ಗುಂಗು ಹತಿರುವಾಗ, ಆ ಚೌಕಟ್ಟು ಮೀರಿದ ಚಿತ್ರವೊಂದು ತಯಾರಾಗಿದೆ ಎಂಬುದೇ ತಂಗಾಳಿ ತೀಡಿದಂಥಾ ಅನುಭೂತಿ. ಅಂಥಾದ್ದೊಂದು ದಿವ್ಯ ಭಾವವೀಗ ಸದಭಿರುಚಿಯ ಪ್ರೇಕ್ಷಕರ ಮೈ ಮನಸುಗಳನ್ನಾವರಿಸಿಕೊಂಡಿದೆ. ಅದೆಲ್ಲವೂ ಸಾಧ್ಯವಾಗಿರೋದು (suchendra prasad) ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಮಾವು ಬೇವು’ ಚಿತ್ರದ ಮೂಲಕ. ಒಂದರ್ಥದಲ್ಲಿ ಇದು ಸದರಿ ಚಿತ್ರಕ್ಕೆ ಲಭಿಸಿರುವ ಆರಂಭಿಕ ಯಶವೆಂದರೂ ಅತಿಶಯವೇನಲ್ಲ. ಅಷ್ಟಕ್ಕೂ ಮಾವು ಬೇವು ಚಿತ್ರ ಆರಂಭವಾದ ರೀತಿ, ಅದಕ್ಕೆ ಕಾರಣವಾದ ಸ್ಫೂರ್ತಿ, ಅದಕ್ಕಾಗಿ ನಡೆದ ದಿಗ್ಗಜರ ಪ್ರಯತ್ನಗಳೆಲ್ಲವೂ ಸಮ್ಮೋಹಕ ಅಧ್ಯಾಯ. ಅದೆಲ್ಲವೂ ದೃಷ್ಯ ರೂಪ ಧರಿಸಿ ಸಾರ್ಥಕ್ಯಗೊಂಡಿದ್ದರಲ್ಲಿ (producer) ನಿರ್ಮಾಪಕರಾದ (s rajashekhar) ಎಸ್.ರಾಜಶೇಖರ್ ಅವರ ಪಾತ್ರ ನಿಜಕ್ಕೂ ಮಹತ್ತರವಾದದ್ದು!
ಸಿನಿಮಾ ನಿರ್ಮಾಣವೆಂಬುದೇ ಅಪ್ಪಟ ವಾಣಿಜ್ಯಕ ವ್ಯವಹಾರ. ಕಾಸು ಹಾಕಿ ದುಪ್ಪಟ್ಟಾಗಿ ವಾಪಾಸು ಪಡೆಯೋದರತ್ತಲೇ ಬಹುತೇಕರ ಕಣ್ಣು ನೆಟ್ಟಿರುತ್ತದೆ. ಬಹುಶಃ ಇಂಥಾ ಮನಃಸ್ಥಿತಿ ಮಾತ್ರವೇ ಇದ್ದಿದ್ದರೆ, ಖಂಡಿತವಾಗಿಯೂ ಕನ್ನಡ ಚಿತ್ರರಂಗ ಹೊಸತರತ್ತ ತೆರೆದುಕೊಳ್ಳಲು, ಪ್ರಯೋಗಗಳಿಗೆ ಒಡ್ಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೊಸತನ ಹೊದ್ದ, ಸಂದೇಶ ಸಾರುವ ಸದಭಿರುಚಿಯ ಸಿನಿಮಾಗಳನ್ನೇ ಗುರಿಯಾಗಿಸಿಕೊಂಡ ರಾಜಶೇಖರ್ ಥರದ ನಿರ್ಮಾಪಕರ ಬೆಂಬಲವಿಲ್ಲದೇ ಹೋಗಿದ್ದರೆ `ಮಾವು ಬೇವು’ ಚಿತ್ರ ಈ ಹಂತ ತಲುಪುವುದು ಕನಸಿನ ಮಾತಾಗುಳಿಯುತ್ತಿತ್ತು. ಎಸ್ಪಿ ಬಾಲಸುಬ್ರಹ್ಮಣ್ಯಂ, ಸಿ.ಅಶ್ವತ್ಥ್, ದೊಡ್ಡರಂಗೇಗೌಡರಂಥಾ ದಿಗ್ಗಜರ ಕನಸು ಕನಸಾಗಿಯೇ ಉಳಿದು ಹೋಗುತ್ತಿತ್ತು.
ಈ ಚಿತ್ರ ನಿರ್ಮಾಣದ ಪ್ರಸ್ತಾವ ಬಂದಾಗಲೇ ಅತ್ಯಂತ ಖುಷಿಯಿಂದ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದವರು ಎಸ್.ರಾಜಶೇಖರ್. ಆ ನಂತರದಲ್ಲಿ ಅಷ್ಟೇ ಕಕ್ಕುಲಾತಿಯಿಂದ ಸಿನಿಮಾ ನಿರ್ಮಾಣ ಮಾಡಿ ಮುಗಿಸಿದ ಧನ್ಯತಾ ಭಾವವೊಂದು ಅವರನ್ನಾವರಿಸಿಕೊಂಡಿದೆ. ಸ್ವತಃ ಉದ್ಯಮಿಯಾಗಿದ್ದರೂ, ಸಾಹಿತ್ಯ, ಸಿನಿಮಾಗಳ ಮೇಲೆ ಅತೀವ ವ್ಯಾಮೋಹ ಹೊಂದಿರುವವರು ರಾಜಶೇಖರ್. ಆ ಅಭಿರುಚಿಯಿಂದಲೇ ಮಾವು ಬೇವು ಚಿತ್ರವನ್ನು ಅವರು ಶ್ರೀ ಸಾಯಿ ಗಗನ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಿನಿಮಾ ವಲಯದ ಬಗ್ಗೆ ಅಪಾರವಾದ ಒಲವಿಟ್ಟುಕೊಂಡಿದ್ದ ಅವರು, 2016ರಲ್ಲಿ ಶ್ರೀ ಸಾಯಿ ಗಗನ್ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದರು. ಅದರ ಮೂಲಕ ಚೆಂದದ ಸಿನಿಮಾಗಳನ್ನು ನಿರ್ಮಾಣ ಮಾಡಬೇಕೆಂಬ ಗುರಿ ಹೊಂದಿದ್ದ ರಾಜಶೇಖರ್ ಅವರು ಸ್ವತಂತ್ರವಾಗಿ ನಿರ್ಮಾಣ ಮಾಡಿದ್ದ ಮೊದಲ ಚಿತ್ರ `ಲೈಫ್ 360’.
ಆ ನಂತರದಲ್ಲಿ 2019ರಲ್ಲಿ `ವೈಟ್’ ಎಂಬ ಚಿತ್ರವನ್ನು ರಾಜಶೇಖರ್ ನಿರ್ಮಣ ಮಾಡಿದ್ದರು. ನೇತ್ರದಾನದ ಬಗ್ಗೆ ಮಹತ್ತರವಾದ ಅಂಶಗಳನ್ನೊಳಗೊಂಡಿದ್ದ ಈ ಚಿತ್ರಕ್ಕೆ ಐ ಬ್ಯಾಂಕ್ ಆಫ್ ಇಂಡಿಯಾ ಸಾಥ್ ಕೊಟ್ಟಿತ್ತು. ಆ ಬಳಿಕ ಅವರ ಮುಂದೆ ಬಂದಿದ್ದು ಮಾವು ಬೇವು ಸಿನಿಮಾ. ಒಟ್ಟಾರೆಯಾಗಿ ಎಲ್ಲ ಕೋನಗಳಿಂದಲೂ ಹೊಸತನ ಹೊಂದಿದ್ದ ಈ ಚಿತ್ರ ಬದುಕಿಗೆ ಹತ್ತಿರಾದ ಅಂಶಗಳನ್ನೊಳಗೊಂಡಿದೆ ಅನ್ನಿಸಿದ್ದರಿಂದಲೇ ರಾಜಶೇಖರ್ ನಿರ್ಮಾಣ ಮಾಡಲು ಮುಂದಾಗಿದ್ದರಂತೆ. ಸುಚೇಂದ್ರ ಪ್ರಸಾದ್, ಜನಪ್ರಿಯ ಗೀತೆಗಳ ಗುಚ್ಛಕ್ಕೆ ದೃಷ್ಯ ರೂಪ ಕೊಡಲು ಸಜ್ಜುಗೊಂಡಿದ್ದ ರೀತಿಯೇ ಅವರಿಗೆ ಮೆಚ್ಚುಗೆಯಾಗಿತ್ತಂತೆ. ಬದುಕಿನ ಏರಿಳಿತದ ಜೊತೆಯಲ್ಲಿಯೇ, ಮೌಲ್ಯಗಳನ್ನು ಪರಿಚಯಿಸುವ ಗುಣ ಹೊಂದಿರುವ ಆ ಚಿತ್ರ, ಮಹತ್ವದ ಮೈಲಿಗಲ್ಲಾಗುತ್ತದೆಂಬ ನಂಬಿಕೆ ಮೂಡಿದ್ದರಿಂದಲೇ ಅವರು ಬಲು ಆಸ್ಥೆಯಿಂದ ನಿರ್ಮಾಣ ಮಾಡಿದ್ದಾರೆ.
ರಾಜಶೇಖರ್ ಅವರ ಉತ್ಸಾಹ ಕಂಡು, ಸುಚೇಂದ್ರ ಪ್ರಸಾದ್ ಅವರ ಮೇಲಿನ ಗೌರವದಿಂದ ಲಹರಿ ವೇಲು ಕೂಡಾ ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಇದು ರಾಜಶೇಖರ್ ಅವರ ಉತ್ಸಾಹ ನೂರ್ಮಡಿಸುವಂತೆ ಮಾಡಿದೆ. ಸುಚೇಂದ್ರ ಪ್ರಸಾದ್ ಅದ್ಭುತವಾದ ಕಥೆ ಸೃಷ್ಟಿಸಿ, ಅದಕ್ಕೆ ತಕ್ಕುದಾದ ಕಲಾವಿದರನ್ನು ಹುಡುಕಿ, ಒಂದಿಡೀ ಚಿತ್ರವನ್ನು ದೃಷ್ಯ ಕಾವ್ಯವಾಗಿಸಿದ ರೀತಿಯ ಬಗ್ಗೆ ರಾಜಶೇಖರ್ ಅವರಲ್ಲೊಂದು ಅಸೀಮ ಮೆಚ್ಚುಗೆ ಇದೆ. ಈ ಸಿನಿಮಾ ಮೂಲಕ ಒಂದು ಸತ್ಸಂಗವೇ ದಕ್ಕಿದ ಆತ್ಮ ತೃಪ್ತಿಯೂ ಅವರಲ್ಲಿದೆ. ಇದೆಲ್ಲದರಿಂದಾಗಿಯೇ ರಾಜಶೇಖರ್ ಅವರು ತಮ್ಮ ತಂದೆಯ ಹುಟ್ಟುಹಬ್ಬವಾದ ಏಪ್ರಿಲ್ ಇಪ್ಪತ್ತೊಂದರಂದೇ ಈ ಸಿನಿಮಾವನ್ನು ತೆರೆಗಾಣಿಸಲು ತೀರ್ಮಾನಿಸಿದ್ದಾರೆ. ಅದು ಮಾವು ಬೇವು ಚಿತ್ರದ ಬಗ್ಗೆ ಅವರಲ್ಲಿರುವ ಪ್ರೀತಿಗೊಂದು ಉದಾಹರಣೆಯಷ್ಟೇ.
ಮೂಲತಃ ಬೆಂಗಳೂರಿನವರೇ ಆಗಿರುವ ಎಸ್. ರಾಜಶೇಖರ್ ಪ್ರೌಢ ಶಿಕ್ಷಣವನ್ನು ನ್ಯಾಷನಲ್ ಹೈಸ್ಕೂಲಿನಲ್ಲಿ ಮುಗಿಸಿಕೊಂಡು, ವಿಜಯಾ ಕಾಲೇಜಿನಲ್ಲಿ ಕಾಮರ್ಸ್ ವಿಷಯದಲ್ಲಿ ಡಿಗ್ರಿಯನ್ನು ಡಿಸ್ಟಿಂಕ್ಷನಿನಲ್ಲಿ ಪಾಸು ಮಾಡಿಕೊಂಡಿದ್ದ ಪ್ರತಿಭಾವಂತ. ಆ ನಂತರದ ದಿನಗಳಲ್ಲಿ ಬದುಕಿನ ಪಥದಲ್ಲಿ ಗಂಭೀರವಾಗಿ ಹೆಜ್ಜೆಯಿಡುತ್ತಾ ಸಾಗಿ ಬಂದಿದ್ದ ಅವರು, ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದಾರೆ. 2014ರಲ್ಲಿ ವಿಜಯಾ ವಾಣಿಜ್ಯ ಅಲ್ಮಿಯ ಫೌಂಡರ್ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸಿ, ಸಹಪಾಠಿಗಳ ಪ್ರೀತಿಯ ಒತ್ತಾಸೆಯ ಫಲವಾಗಿ ಆರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಆ ನಂತರದಲ್ಲಿ ಎರಡು ವರ್ಷಗಳ ಕಾಲ ಫಾಸ್ಟ್ ಪ್ರೆಸಿಡೆಂಟ್ ಆಗಿಯೂ ಜವಾಬ್ದಾರಿ ನಿಭಾಯಿಸಿದ್ದರು. ಈ ಅವಧಿಯಲ್ಲಿ ನಾನಾ ಬಗೆಯ ಸಾರ್ಥಕ ಕ್ಷಣಗಳನ್ನು ತಮ್ಮದಾಗಿಸಿಕೊಂಡ ತುಂಬ ಖುಷಿ ರಾಜಶೇಖರ್ ಅವರಲ್ಲಿದೆ. ಇದೆಲ್ಲದರ ಜೊತೆಗೆಹಲವಾರು ವಿದ್ಯಾ ಸಂಸ್ಥೆಗಳ ಟ್ರಸ್ಟಿಯಾಗಿ, ಅಧ್ಯಕ್ಷರಾಗಿ ಅಕ್ಷರ ಸೇವೆಯನ್ನೂ ಮಾಡುತ್ತಾ ಬಂದಿರುವ ರಾಜಶೇಖರ್, ತಮ್ಮ ತಾಯಿಯ ಹೆಸರಿನಲ್ಲೇ ಸರ್ವಮಂಗಲ ಚಾರಿಟಬಲ್ ಎಂಬ ಫ್ಯಾಮಿಲಿ ಟ್ರಸ್ಟ್ ಅನ್ನೂ ಮುನ್ನಡೆಸುತ್ತಿದ್ದಾರೆ. ಈ ಮೂಲಕ ಅನೇಕ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಹೀಗೆ ರತಿಯೊಂಉ ವಿಚಾರದಲ್ಲಿಯೂ ಭಿನ್ನವಾಗಿ ಕಾಣಿಸುವ ರಾಜಶೇಖರ್, ನಿಸ್ಸಂದೇಹವಾಗಿಯೂ ಕನ್ನಡ ಚಿತ್ರರಂಗಕ್ಕೆ ಹೊಸಾ ದಿಕ್ಕು ತೋರುವ ಕಸುವಿರುವ ನಿರ್ಮಾಪಕರು. ಅವರೊಳಗೆ ವ್ಯವಹಾರದಾಚೆಗಿನ ಸಿನಿಮಾ ಪ್ರೇಮವೊಂದು ಪ್ರವಹಿಸದೇ ಇದ್ದಿದ್ದರೆ ಈವತ್ತಿಗೆ ಮಾವು ಬೇವು ಇತ್ರ ಮೈ ಕೈ ತುಂಬಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಸಿನಿಮಾ ಬಿಡುಗಡೆಯಾದ ನಂತರವೂ ಮತ್ತೊಂದಷ್ಟು ಒಳ್ಳೆ ಕಂಟೆಂಟಿನ ಸಿನಿಮಾಗಳನ್ನು ನಿರ್ಮಾಣ ಮಾಡಬೇಕೆಂಬ ಮಹದಾಸೆ ರಾಜಶೇಖರ್ ಅವರಲ್ಲಿದೆ. ನಿರ್ಮಾಣದ ವಿಚಾರದಲ್ಲಿ ಅತ್ಯಂತ ಶಿಸ್ತು ರೂಢಿಸಿಕೊಂಡಿರುವ ಅವರು, ಇನ್ನು ಮುಂದೆ ಎರಡು ವರ್ಷಕ್ಕೊಂದಾದರೂ ಸಿನಿಮಾ ನಿರ್ಮಾಣ ಮಾಡುವ ಗುರಿ ಹೊಂದಿದ್ದಾರೆ. ಅವರ ಕಡೆಯಿಂದ ಇನ್ನೊಂದಷ್ಟು ಸಿನಿಮಾಗಳ ನಿರ್ಮಾಣವಾಗಲಿ, ದೊಡ್ಡ ಮಟ್ಟದಲ್ಲಿ ಯಶ ಕಾಣಲೆಂಬುದು ಹಾರೈಕೆ!