ಇದು ಹಠಾತ್ತನೇ ಅಖಾಡಕ್ಕಿಳಿದು ರಾತ್ರಿ ಕಳೆದು ಬೆಳಗಾಗೋದರೊಳಗೆ ಪ್ರಖ್ಯಾತಿ ಗಳಿಸುವ ಕಾಲಮಾನ. ವಾಸ್ತವವೆಂದರೆ, ಸಾಮಾಜಿಕ ಜಾಲತಾಣಗಳನ್ನೇ ನೆಚ್ಚಿಕೊಂಡು ಮೆರೆಯುವ ಇಂಥಾ ಮಂದಿ ಬಹುಬೇಗನೆ ಮೂಲೆಗೆ ಸರಿದು ಬಿಡುತ್ತಾರೆ. ಆ ಕ್ಷಣಕ್ಕೆ ಯಾವುದಕ್ಕೆ ಮೈಲೇಜ್ ಇದೆಯೋ, ಅದೇ ವೇಷ ಧರಿಸಿ ಹೊರಡೋ ಇಂಥಾ ಮಂದಿಯ ಹಕೀಕತ್ತುಗಳೆಲ್ಲ ಜನರಿಗೆ ಸ್ಪಷ್ಟವಾಗಿಯೇ ಗೊತ್ತಾಗುತ್ತೆ. ಆಗಾಗ ಸಾಮಾಜಿಕ ಹೋರಾಟಗಾರನಂತೆ ಗೆಟಪ್ಪು ಬದಲಿಸುತ್ತಾ, ಅದೇ ಬಲದೊಂದಿಗೆ ಬಿಗ್‍ಬಾಸ್ ಶೋಗೂ ಹೋಗಿ ಬಂದಿರುವ ಪ್ರಶಾಂತ್ ಸಂಬರ್ಗಿ ನಿಸ್ಸಂದೇಹವಾಗಿಯೂ ಆ ಸಾಲಿಗೆ ಸೇರಿಕೊಳ್ಳುವ ಆಸಾಮಿ. ಜಟ್ಕಾ, ಹಲಾಲ್ ಕಟ್ ಅಂತೆಲ್ಲ ಜುಟ್ಟು ಕೆದರಿಕೊಂಡು ಕುಣಿದಾಡಿದ್ದ ಸಂಬರ್ಗಿ ಇದೀಗ ಮತ್ತೊಂದು ಹೊಸಾ ಅವತಾರವೆತ್ತಿದ್ದಾರೆ!
ಬಿಗ್ ಬಾಸ್ ಶೋನ ಸಂದರ್ಭದಲ್ಲಿಯೇ ಸಂಬರ್ಗಿಯ ಶಕುನಿಯ ಅವತಾರವೊಂದು ಪಟ್ಟಂಪೂರಾ ಜಾಹೀರಾಗಿತ್ತು. ಒಂದಷ್ಟು ದಿನಗಳ ಕಾಲ ಆತನ ಆಟ, ಅಟಾಟೋಪಗಳನ್ನು ಗಮನಿಸಿದ್ದ ಮಂದಿ ಸಂಬರ್ಗಿ ರಾಜಕಾರಣಿಯಾಗಲು ಲಾಯಕ್ಕಾದ ಆಸಾಮಿ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಕಡೆಗೂ ಇದೀಗ ಏಕಾಏಕಿ ಸಂಬರ್ಗಿ ರಾಜಕಾರಣಿಯಾಗಿದ್ದಾರೆ. ಹಾಗಂತ, ಅದು ನಿಜ ಜೀವನದಲ್ಲಿ ಅಂದುಕೊಳ್ಳಬೇಕಿಲ್ಲ. ಧಾರಾವಾಹಿ ಮಂದಿಯ ಟಿಆರ್‍ಪಿ ಮೇಲಾಟವಿದೆಯಲ್ಲಾ? ಅದರ ಫಲವಾಗಿಯೇ ಸೀರಿಯಲ್ಲೊಂದರಲ್ಲಿ ಸಂಬರ್ಗಿಗಾಗಿಯೇ ಒಂದು ಪಾತ್ರವನ್ನು ಸೃಷ್ಟಿಸಲಾಗಿದೆ. ಅದರ ಫಲವಾಗಿಯೇ ಪ್ರಶಾಂತ್ ಸಂಬರ್ಗಿ ಭೈರತಿ ಕುಣಿಗಲ್ ಅಂತೊಂದು ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ `ಬೆಂಕಿಯಲ್ಲಿ ಅರಳಿದ ಹೂ’ ಅಂತೊಂದು ಧಾರಾವಾಹಿ ಪ್ರಸಾರವಾಗುತ್ತಿದೆ. ಅದೇ ಚರ್ವಿತಚರ್ವಣ ಕಥಾನಕದ ಈ ಧಾರಾವಾಹಿ ಸದ್ಯದ ಮಟ್ಟಿಗೆ ಒಂದಷ್ಟು ಜನಪ್ರಿಯತೆ ಗಳಿಸಿಕೊಂಡಿದೆ. ಅತ್ತೆ ಸೊಸೆ ಮುನಿಸು, ಮನೆಯೊಳಗಿನ, ಹೊರಗಿನ ರಾಜಕಾರಣದ ಈ ಕಥಾನಕದಲ್ಲೀಗ ಪ್ರಶಾಂತ್ ಸಂಬರ್ಗಿಯ ಪ್ರವೇಶವಾಗಿ ಬಿಟ್ಟಿದೆ. ಭಯಂಕರ ಗತ್ತು ಗೈರತ್ತಿನೊಂದಿಗೆ ಸಂಬರ್ಗಿಯ ಪ್ರವೇಶವಾಗಿದೆ. ಆದರೆ ಮಫ್ತಿ ಚಿತ್ರದಲ್ಲಿ ಭೈರತಿ ರಣಗಲ್ ಎಂಬ ಪಾತ್ರವನ್ನು ಸಂಭ್ರಮಿಸಿದ ಮಂದಿಗೆಲ್ಲ, ಭೈರತಿ ಕುಣಿಗಲ್ ಎಂಬುದು ಪಕ್ಕಾ ಕಾಮಿಡಿಯಂತೆ ಕೇಳಿಸುತ್ತಿದೆ. ಅಷ್ಟಕ್ಕೂ ನಿಜ ಜೀವನದಲ್ಲಿಯೇ ನಾನಾ ಪಾತ್ರ ನಿರ್ವಹಿಸುತ್ತಾ, ಸೀರಿಯಸ್ ಆಗಿಯೇ ಕಾಮಿಡಿ ಮಾಡೋ ಕಲೆ ಸಂಬರ್ಗಿಗೆ ಸಿದ್ಧಿಸಿದೆ. ಹಾಗಿರುವಾಗ ಭೈರತಿ ಕುಣಿಗಲ್ ಪಾತ್ರ ಆತನಿಗೇನೂ ಸವಾಲೆನಿಸಲಿಕ್ಕಿಲ್ಲ!