ಇನ್ನೇನು ಲೋಕಸಭಾ ಚುನಾವಣೆಗೆ ಎರಡು ವರ್ಷಗಳು ಬಾಕಿ ಇರುವಾಗಲೇ, ರಾಜಕೀಯ ರಂಗದಲ್ಲಿ ಅದಕ್ಕಾಗಿನ ತಯಾರಿಗಳು ತಾರಕಕ್ಕೇರಿವೆ. ಅದರಲ್ಲಿಯೂ ವಿಶೇಷವಾಗಿ, ದೇಶಾದ್ಯಂತ ಅತ್ಯಂತ ಹೀನಾಯ ಸ್ಥಿತಿ ತಲುಪಿಕೊಂಡಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ನಲ್ಲಿಯಂತೂ ಸದ್ಯಕ್ಕೆ ಹೊಸಾ ಬಗೆಯ ಸಂಚಲನವೇ ಶುರುವಿಟ್ಟುಕೊಂಡಿದೆ. ಪ್ರತೀ ಬಾರಿಯೂ ಚುನಾವಣೆ ಕಣ್ಣಳತೆಯಲ್ಲಿದ್ದಾಗ ಕಣ್ಣುಜ್ಜಿಕೊಂಡು ಅಖಾಡಕ್ಕಿಳಿಯುತ್ತಿದ್ದ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ತುಸು ಮುಂಚೆಯೇ ಎಚ್ಚರಗೊಂಡಿದೆ. ಅದರ ಫಲವಾಗಿಯೇ ಶುರುವಾಗಿರೋದು ಭಾರತ್ ಜೋಡೋ ಯಾತ್ರೆ!
ರಾಹುಲ್ ಗಾಂಧಿ ಸಾರಥ್ಯದಲ್ಲಿ ಶುರುವಾಗಿರುವ ಈ ಯಾತ್ರೆ ಎಲ್ಲ ರಾಜ್ಯಗಳನ್ನೂ ಬಳಸಿಕೊಂಡು ಸಾಗುವಂಥಾ ಮಹತ್ವಾಕಾಂಕ್ಷೆ ಹೊಂದಿದೆ. ಈ ಯಾತ್ರಗೆ ಸಿಗುತ್ತಿರುವ ಜನರ ಪ್ರತಿಕ್ರಿಯೆಗಳೇ ಒಂದು ಮಟ್ಟಿಗೆ ಕಾಂಗ್ರೆಸ್ ಪಕ್ಷಕ್ಕೆ ನವೋಲ್ಲಾಸ ತಂದುಕೊಟ್ಟಿದೆ. ಸಾಲು ಸಾಲಾಗಿ ಹಿರಿಯ ನಾಯಕರು ರಾಜೀನಾಮೆ ಕೊಟ್ಟು, ಒಂದಷ್ಟು ನಾಯಕರನ್ನು ಬಿಜೆಪಿ ಆಪರೇಷನ್ ಕಮಲದಲ್ಲಿ ಸೆಳೆದುಕೊಂಡ ಪರಿಣಾಮ ಕಾಂಗ್ರೆಸ್ ನಿತ್ರಾಣ ಸ್ಥಿತಿಯಲ್ಲಿತ್ತು. ಆದರೀಗ ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಒಂದಷ್ಟು ನಳನಳಿಸುವಂತೆ ಕಾಣಿಸುತ್ತಿದೆ. ಈ ಬಗ್ಗೆ ಕಾಂಗ್ರೆಸ್ನ ಹಿರಿಯ ನಾಯಕ ಜೈರಾಮ್ ರಮೇಶ್ ಈ ವಿದ್ಯಮಾನದ ಬಗ್ಗೆ ಮಾತಾಡಿದ್ದಾರೆ. ಈ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಸಿಗುತ್ತಿರುವ ಭರಪೂರ ಬೆಂಬಲ ಕಂಡು ಬಿಜೆಪಿ ಥರಗುಟ್ಟಿ ಹೋಗಿದೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಜೈರಾಮ್ ರಮೇಶ್ ಕಾಂಗ್ರೆಸ್ ಕೇಂದ್ರಿತವಾಗಿ ನಡೆಯುತ್ತಿರುವ ಮತ್ತೊಂದಷ್ಟು ವಿದ್ಯಮಾನಗಳಬಗ್ಗೆಯೂ ಮಾತಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಮಹಾ ಘಟಬಂಧನ್ ಹೆಸರಲ್ಲಿ ಒಂದಷ್ಟು ವಿರೋಧ ಪಕ್ಷಗಳು ಒಗ್ಗೂಡಿದ್ದವು. ಈ ಬಾರಿಯೂ ಅಂಥಾದ್ದೇ ಮಂತ್ರ ಕೇಳಿ ಬರುತ್ತಿದೆ. ಹೀಗೆ ಬೇರೆ ಪಕ್ಷಗಳನ್ನು ಒಗ್ಗೂಡಿಸಿ ಮುಂದುವರೆದರೂ ಕೂಡಾ ಕಾಂಗ್ರೆಸ್ ಪಕ್ಷ ದುರ್ಬಲವಾಗೋದಿಲ್ಲ ಎಂದು ಜೈರಾಮ್ ರಮೇಶ್ ಪ್ರತಿಪಾದಿಸಿದ್ದಾರೆ. ಈ ಬಾರಿ ಘಟಬಂಧನ್ನ ಹೊಸಾ ವರ್ಷನ್ನಿನ ಮೂಲಕ ಬಿಜೆಪಿಯನ್ನು ಮಣಿಸುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.