ಕಡು ಬೇಸಗೆಯ ರಣ ಬಿಸಿಲಿಗೇ ಸವಾಲೊಡ್ಡುವಂತೆ ರಾಜ್ಯಾದ್ಯಂತ ಚುನಾವಣೆಯ ಕಾವೇರಿಕೊಂಡಿದೆ. ಬಹುತೇಕ ಪಕ್ಷಗಳು, ರಾಜಕಾರಣಿಗಳು ನಾನಾ ಆಮಿಷಗಳನ್ನೊಡ್ಡುತ್ತಾ ಮತದಾರರನ್ನು ಮರುಳು ಮಾಡುವ ನಿಟ್ಟಿನಲ್ಲಿ ಪೈಪೋಟಿಗೆ ಬಿದ್ದಿದ್ದಾರೆ. ಇದೇ ಹೊತ್ತಿನಲ್ಲಿ ಸದ್ಯ ಅಧಿಕಾರ ಕೇಂದ್ರದಲ್ಲಿರುವ ಬಿಜೆಪಿ ಮಂದಿ ಅಭಿವೃದ್ಧಿ ತೋರಿಸಿ ಮತ ಕೇಳುವ ಯೋಗ್ಯತೆ ಇಲ್ಲದೆ ನಾನಾ ಆಟ ಕಟ್ಟುತ್ತಿದ್ದಾರೆಂಬ ಅಸಹನೆ ಮತದಾರರಲ್ಲಿಯೇ ಇದೆ. ಕಪೋಲ ಕಲ್ಪಿತ ಇಹಿಹಾಸ ಕೆದಕುತ್ತಾ, ಆ ಹುದುಲಿನಿಂದ ನಾನಾ ನಮೂನೆಯ ಹೀರೋಗಳನ್ನು, ವೀರಾಧಿ ವೀರರನ್ನು ಉತ್ಖನನ ಮಾಡುವಲ್ಲಿ ಬಿಜೆಪಿ ಮಂದಿ ನಿಸ್ಸೀಮರು. ಅಂಥಾ ದಂಡಿನ ದಂಡನಾಯಕನಂತಿರುವಾತ ಸಿ.ಟಿ ರವಿ!
ಚುನಾವಣೆಗೆ ಒಂದಷ್ಟು ಸಮಯ ಇರುವಾಗಲೇ ಸಿ.ಟಿ ರವಿ ಉರಿಗೌಡ ನಂಜೇಗೌಡರ ಹೆಸರನ್ನು ಮಂತ್ರವೆಂಬಂತೆ ಪಠಿಸಲಾರಂಭಿಸಿದ್ದ. ಈ ಹುನ್ನಾರಕ್ಕೆ ಬಿಜೆಪಿ ಅಜೆಂಡಾಗಳ ಸಂಪೂರ್ಣ ಬೆಂಬಲ ಸಿಕ್ಕಿದ್ದರಿಂದ ರವಿಯ ಉರಿ ಮತ್ತು ನಂಜು ಮತ್ತಷ್ಟು ಉಲ್ಬಣಗೊಂಡಿತ್ತು. ಹಾಗೊಂದು ಉತ್ತೇಜನ ಸಿಕ್ಕಿದ್ದೇ ಸಿಟಿ ರವಿ ಸಾಹೇಬರು ಪಟ್ಟಾಗಿ ಕೂತು ಸಂಶೋಧನೆ ನಡೆಸುತ್ತಾ, ಉರಿ ಮತ್ತು ನಂಜೇಗೌಡರನ್ನು ಟಿಪ್ಪುವನ್ನು ಕೊಂದ ಮಂಡ್ಯ ಸೀಮೆಯ ಒಕ್ಕಲಿಗರಂತೆ ಬಿಂಬಿಸಲು ಹೆಣಗಾಡಿದ್ದರು. ಈ ಮೂಲಕ ಪರ ವಿರೋಧಗಳ ಬೆಂಕಿ ಹಚ್ಚಿ ಆರಾಮವಾಗಿ ಕೂತು ಗಡ್ಡ ನೀವಿಕೊಂಡಿದ್ದರು.
ಅದರ ಹಿಂದೆ ಮಂಡ್ಯ ಮತ್ತು ಹಳೇ ಮೈಸೂರು ಸೀಮೆಯಲ್ಲಿ ಬಿಜೆಪಿಗೊಂದು ಭದ್ರ ನೆಲೆ ಕಂಡುಕೊಳ್ಳುವ ಹುನ್ನಾರಗಳಿದ್ದವೆಂಬ ವಿಶ್ಲೇಷಣೆಗಳೂ ಇದ್ದಾವೆ. ಅದರಲ್ಲಿ ನಿಜವೂ ಇದೆ. ಯಾಕೆಂದರೆ, ಆ ಹುನ್ನಾರದ ಭಾಗವಾಗಿಯೇ ಮಂಡ್ಯಕ್ಕೆ ಮೋದಿ ಆಗಮಿಸುವಾಗ, ಸ್ವಾಗತ ಕೋರಲು ಉರಿಗೌಡ, ನಂಜೇಗೌಡರ ಮಹಾ ದ್ವಾರವನ್ನೇ ತೆರೆಯಲಾಗಿತ್ತು. ಯಾವ ಕುರುಹುಗಳೂ ಇಲ್ಲದ ಈ ವೀರರ ಮಹಾದ್ವಾರ ನಿರ್ಮಾಣ ಮಾಡಿದ್ದರ ವಿರುದ್ಧ ಎಲ್ಲರೂ ಉಗಿದರು ನೋಡಿ? ರಾತ್ರೋರಾತ್ರಿ ಮಂಡ್ಯ ಹೈವೇಯಿಂದ ಉರಿಗೌಡ, ನಂಜೇಗೌಡರೆಂಬ ಸಿಟಿ ರವಿಯ ವೀರರು ಪೇರಿ ಕಿತ್ತಿದ್ದರು. ಆದರೂ ಕೂಡಾ ರವಿ ಮಾತ್ರ ಉರಿ ನಂಜಿನ ಖಾಯಿಲೆಯಿಂದ ಗುಣಮುಖರಾದಂತೆ ಕಾಣಿಸಲಿಲ್ಲ!
ಪಟ್ಟು ಹಿಡಿದು ಮುಂದುವರೆದ ರವಿ, ಉರಿ ನಂಜಿಗೆ ಸಿನಿಮಾ ರೂಪದಲ್ಲೊಂದು ಸಮರ್ಥನೆ ನೀಡಲು ಮುಂದಾಗಿ ಮುನಿರತ್ನನ ಸಾಥ್ ಪಡೆದುಕೊಂಡಿದ್ದರು. ಇಂಥಾ ಐತಿಹಾಸಿಕ ಸರಕುಗಳನ್ನಿಟ್ಟುಕೊಂಡು ಕಾರ್ಟೂನಿನಂತೆ ರೀಲು ಸುತ್ತೋದರಲ್ಲಿ ಈ ಮುನಿರತ್ನನದ್ದು ಎತ್ತಿದ ಕೈ. ಯಾವಾಗ ಉರಿ ನಂಜು ವ್ಯಾಪಕವಾಗಿ ಹಬ್ಬಿಕೊಂಡು, ಅದಕ್ಕೆ ಒಕ್ಕಲಿಗ ಸಮುದಾಯ ದಾಳವಾಗುತ್ತದೆಂಬುದರ ಅರಿವಾಯ್ತೋ ಆವಾಗ ಒಕ್ಕಲಿಗರ ಜಗದ್ಗುರು ನಿರ್ಮಲಾನಂದ ಶ್ರೀಗಳಿಂದ ಮುನಿಗೆ ಬುಲಾವು ಬಂದಿದೆ. ಇಂಥಾ ತಲೆಬುಡವಿಲ್ಲದ ಕಲ್ಪಿತ ಕಥೆಗಳನ್ನು ಅಧಿಕೃತವೆಂದು ಬಿಂಬಿಸಿ ಸಿನಿಮಾ ಮಾಡ ಹೊರಟಿದ್ದ ಮುನಿರತ್ನಗೆ ಸಾತ್ವಿಕ ಚೌಕಟ್ಟಿನಲ್ಲಿಯೇ ಮಹಾಮಂಗಳಾರತಿ ನಡೆದಿದೆ. ಅಲ್ಲಿಂದ ಓಡೋಡಿ ಬಂದ ಮುನಿ ಇನ್ನು ಮುಂದೆ ಸಿನಿಮಾ ಮಾಡೋದಿರಲಿ, ಉರಿ ನಂಜಿನ ಹೆಸರನ್ನು ಕೂಡಾ ಎತ್ತೋದಿಲ್ಲ ಎಂಬಲ್ಲಿಗೆ ಸಿಟಿ ರವಿಯ ಕಾಯಿಲೆ ಫೈನಲ್ ಸ್ಟೇಜಿಗೆ ಬಂದು ನಿಂತಿತ್ತು.
ಸಾಕ್ಷಾತ್ತು ನಿರ್ಮಲಾನಂದರೇ ಉರಿ ನಂಜೆಂಬುದು ಆಧಾರವಿಲ್ಲದ ಕಲ್ಪಿತ ಪಾತ್ರಗಳೆಂಬಂತೆ ಹೇಳಿಕೆ ನೀಡಿದರೋ ಆಗ ರವಿಗೆ ಪೀಕಲಾಟ ಶುರುವಿಟ್ಟುಕೊಂಡಿದೆ. ಗುರುಗಳೇ ಹೇಳಿದ ನಂತರವೂ ತಾನು ಹರಿಬಿಟ್ಟ ಸುಳ್ಳಿಗೆ ಪುರಾವೆ ಹುಡುಕೋದಾಗಿ ಹೇಳಿ ಹುಂಬತನ ಪ್ರದರ್ಶಿಸಿದ್ದಾರೆ. ಆದರೀಗ ಈ ಸಿಟಿ ರವಿ ಎಂಥಾ ಬಕ್ವಾಸ್ ಆಸಾಮಿ ಎಂಬುದು ಜಾಹೀರಾಗಿದೆ; ಖುದ್ದು ಆತನ ಗೆಣೆಕಾರ ಕಂ ರಂಗಕರ್ಮಿ ಅದ್ದಂಡ ಕಾರ್ಯಪ್ಪ ನೀಡಿದೊಂದು ಹೇಳಿಕೆಯ ಮೂಲಕ. ಈ ನಿಟ್ಟಿನಲ್ಲಿ ಹೇಳೋದಾದರೆ, ಈ ಉರಿ ನಂಜು ಅದ್ದಂಡ ಸೃಷ್ಟಿಸಿದ್ದ ನಾಟಕದ ಪಾತ್ರಗಳು. ಅದು ತನ್ನ ಸಾಹಿತ್ಯಕ ಸೃಷ್ಟಿಯೇ ಹೊರತು ಇತಿಹಾಸವಲ್ಲ ಅಂತ ಅದ್ದಂಡ ಕಾರ್ಯಪ್ಪ ಬಾಯಿ ಬಡಿದುಕೊಂಡಿದ್ದಾರೆ. ಇಂಥಾ ನಾಟಕದ ಪಾತ್ರಗಳನ್ನು ನಿಜ ಇತಿಹಾಸದಂತೆ ಬಿಂಬಿಸುತ್ತಾರೆಂದರೆ, ಈ ಸಿ.ಟಿ ರವಿಗೆ ಅದ್ಯಾವ ಪರಿಯಲ್ಲಿ ಧರ್ಮ ವ್ಯಾಧಿ ಹಬ್ಬಿಕೊಂಡಿರಬಹುದು?