ನೋವೆಲ್ಲವನ್ನೂ ಎದೆಯಲ್ಲಿಯೇ ಹುಗಿದಿಟ್ಟುಕೊಂಡು ನಗುತ್ತಾ ಬದುಕೋದಿದೆಯಲ್ಲಾ? ಅದು ಸಾಮಾನ್ಯರಿಗೆ ಸಿದ್ಧಿಸೋ ಸಂಗತಿಯೇನಲ್ಲ. ಅದರಲ್ಲೂ ಅಂಥ ನೋವಿಟ್ಟುಕೊಂಡು ನಗಿಸೋದನ್ನೇ ಬದುಕಾಗಿಸಿಕೊಳ್ಳೋದೊಂದು ಸಾಹಸ. ನೀವೇನಾದ್ರೂ ಕಮೇಡಿಯನ್ನುಗಳಾಗಿ ಗೆದ್ದವರ ಬದುಕಿನ ಹಿನ್ನೆಲೆ ಹುಡುಕಿದ್ರೆ ಅಲ್ಲೊಂದು ನೋವಿನ ಕಥೆ ಇದ್ದೇ ಇರುತ್ತೆ. ಈಗ ಹೇಳ ಹೊರಟಿರೋ ಕಥೆ ಕೂಡಾ ಅಂಥದ್ದೆ.
ಜಿಮ್ ಕ್ಯಾರಿ ಈ ಕಥೆಯ ನಾಯಕ. ಈತ ಕೆನಡಿಯನ್, ಅಮೆರಿಕನ್ ನಟ. ಇತ್ತೀಚಿನ ದಿನಗಳಲ್ಲಿ ಸ್ಟ್ಯಾಂಡಪ್ ಕಮೆಡಿಯನ್ ಆಗಿಯೂ ಬಲು ವಿಖ್ಯಾತಿ ಗಳಿಸಿಕೊಂಡಿರುವಾತ. ಈವತ್ತಿಗೆ ಆತ ಖ್ಯಾತಿಯ ಉತ್ತುಂಗವೇರಿದ್ದಾನೆ. ಆರ್ಥಿಕವಾಗಿಯೂ ಸಾಕಷ್ಟು ಬಲಾಢ್ಯನಾಗಿದ್ದಾನೆ. ಆದರೆ ಆತನ ಕಾಮಿಡಿ ಪ್ರೋಗ್ರಾಮುಗಳನ್ನು ನೋಡಿದವರ್ಯಾರೂ ಆತ ನಡೆದು ಬಂದು ಕಡು ಕಷ್ಟದ ಹಾದಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಜಗತ್ತಿನ ಅದೃಷ್ಟವಂತ ಮಕ್ಕಳೆಲ್ಲ ಬದುಕನ್ನು ಬೆರಗಿಂದ ನೋಡೋ ಕಾಲದಲ್ಲಿಯೇ ಜಿಮ್ ಪಾಲಿಗೆ ದುರಾದೃಷ್ಟ ವಕ್ಕರಿಸಿಕೊಂಡಿತ್ತು. ಆತನದ್ದು ತೀರಾ ಬಡತನದ ಫ್ಯಾಮಿಲಿ. ಅಪ್ಪ ಹೇಗೋ ಕಷ್ಟಪಟ್ಟು ಒಂದು ಕೆಲಸ ಮಾಡುತ್ತಾ ಸಂಸಾರವನ್ನ ನಿಭಾಯಿಸ್ತಿದ್ದ. ಆದ್ರೆ ಅದೊಂದು ದಿನ ಇದ್ದೊಂದು ಕೆಲಸವೂ ಕೈತಪ್ಪಿ ತಂದೆ ದಿಕ್ಕು ತೋಚದಂತಾಗಿ ಕ್ರಮೇಣ ಹಾಸಿಗೆ ಹಿಡಿದು ಬಿಟ್ಟಿದ್ದ.
ಆ ಹೊತ್ತಿನಲ್ಲಿ ಇಡೀ ಸಂಸಾರ ನಿಭಾಯಿಸುವ ಜವಾಬ್ದಾರಿ ಕಿಮ್ನ ಹೆಗಲೇರಿಕೊಂಡಿತ್ತು. ಆತ ಕೆಲಸಕ್ಕಾಗಿ ಅಲ್ಲಿಲ್ಲಿ ಅಡ್ಡಾಡಿ ಕಡೆಗೂ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಅದರ ನಡುವೆಯೇ ಓದನ್ನೂ ಮುಂದುವರೆಸಿದ್ದ. ಹಾಗೆ ಕಷ್ಟ ಹೆಗಲೇರಿಕೊಳ್ಳೋ ಕಾಲದಲ್ಲಿ ಕಿಮ್ಗೆ ಕೇವಲ ಹದಿನಾಲಕ್ಕು ವರ್ಷ. ಅಂಥಾ ಕಷ್ಟವಿದ್ದರೂ ಕೂಡಾ ಕಿಮ್ ಶೋ ಒಂದರಲ್ಲಿ ಪರ್ಫಾರ್ಮೆನ್ಸ್ ನೀಡಿ ನಂತರ ನಟನಾಗಿ ಹೊರಹೊಮ್ಮಿದ್ದೊಂದು ಸ್ಫೂರ್ತಿದಾಯಕ ಕಥೆ.