ಮೀನುಗಾರಿಕಾ ವೃತ್ತಿ ನಡೆಸುವವರನ್ನು ಕಡಲ ಮಕ್ಕಳೆಂದೇ ಕರೆಯೋದು ವಾಡಿಕೆ. ಆದರೆ ಕಡಲಿಗಿಳಿದವರು ಮತ್ತೆ ಸುರಕ್ಷಿತವಾಗಿ ಗೂಡು ಸೇರಿಕೊಳ್ಳುತ್ತಾರೆಂಬುದಕ್ಕೆ ಯಾವ ಗ್ಯಾರೆಂಟಿಯೂ ಇಲ್ಲ. ನಮ್ಮದೇ ದಕ್ಷಿಣ ಕನ್ನಡದ ಕರಾವಳಿ ತೀರದಲ್ಲಿ ನಾಪತ್ತೆಯಾದ ಅದೆಷ್ಟೋ ಮೀನುಗಾರರು ಇಂದಿಗೂ ಪತ್ತೆಯಾಗಿಲ್ಲ. ಅದು ಕಡಲ ಗರ್ಭದ ಕರಾಳ ನಿಗೂಢ. ಹೀಗೆ ಮೀನು ಹಿಡಿಯಲು ತೆರಳಿದವರ ಬದುಕಿನ ಬೆಚ್ಚಿ ಬೀಲಿಸೋ ಕಥನಗಳಿಗೆ, ದುರಂತಗಳಿಗೆ ಕೊನೆ ಮೊದಲಿಲ್ಲ. ಈಗ ಹೇಳ ಹೊರಟಿರೋದು ಅಂಥಾದ್ದೇ ಕಥೆ. ವಿಶೇಷವೆಂದರೆ, ಅದರ ಕ್ಲೈಮ್ಯಾಕ್ಸು ದುರಂತವಲ್ಲ. ಕಣ್ಣು ಹಾಯಿಸಿದಷ್ಟೂ ದೂರ ನೀರಲ್ಲದೆ ಮತ್ತೇನೂ ಕಾಣಿಸದಂಥಾ ಕಡಲು. ಅದರ ನಡುವೆ ಬಿರುಗಾಳಿಗೆ ಸಿಕ್ಕು ಕೆಟ್ಟು ನಿಂತ ನಾವೆ. ಅದರೊಳಗೆ ಅದುವರೆಗಿನ ಶ್ರಮದ ಫಲವಾಗಿ ಗುಡ್ಡೆಬಿದ್ದ ಐದು ಕ್ವಿಂಟಾಲಿನಷ್ಟು ಮೀನಿನ ರಾಶಿ ಮತ್ತು ಅದರ ಇಕ್ಕೆಲದಲ್ಲಿ ಯಾವ ದಿಕ್ಕೂ ತೋಚದೆ ಕಂಗಾಲಾಗಿ ನಿಂತ ಎರಡು ಜೀವಗಳು… ಇವಿಷ್ಟು ವಿವರಗಳೇ ಅದೆಂಥಾ ಕಠೋರ ಕ್ಷಣಗಳೆಂಬುದನ್ನು ಯಾರಿಗಾದರೂ ಮನದಟ್ಟು ಮಾಡಿಸುತ್ತವೆ. ಅಂಥಾದ್ದೊಂದು ಘೋರ ಸ್ಥಿತಿಯಲ್ಲಿ ಸಮುದ್ರದ ನಡುವಲ್ಲಿ ತಿಂಗಳು ಕಳೆದಾಗಲೇ ಇಬ್ಬರಲ್ಲೊಬ್ಬ…