ಹೊಸಾ ಅವತಾರದ ಸೋನು ಪ್ರೇಕ್ಷಕರ ಮನಗೆಲ್ಲುತ್ತಾರಾ?
ಒಂದಷ್ಟು ಯಶಸ್ಸು ಕಂಡ ಪ್ರತೀ ನಟ ನಟಿಯರನ್ನೂ ಕೂಡಾ ಭಿನ್ನ ಬಗೆಯ ಪಾತ್ರಗಳು ಸೆಳೆಯುತ್ತವೆ. ಅಂಥಾದ್ದೊಂದು ತುಡಿತ ಕಲಾವಿದರೊಳಗೆ ಮೂಡಿಕೊಳ್ಳೋದಿದೆಯಲ್ಲಾ? ಅದು ಅವರ ಕಡೆಯಿಂದ ಅಚ್ಚರಿದಾಯಕ ಪಾತ್ರಗಳು ಎದುರುಗೊಳ್ಳುವ ಸ್ಪಷ್ಟ ಲಕ್ಷಣ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಪ್ರೀತಿ ಸಂಪಾದಿಸಿಕೊಂಡಿರುವ ಸೋನು ಗೌಡ ಕೂಡಾ ಅಂಥಾದ್ದೊಂದು ಪಲ್ಲಟಕ್ಕೆ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ. ಅದರ ಫಲವಾಗಿಯೇ ವಿಕ್ರಂ ಪ್ರಭು ನಿರ್ದೇಶನದ ವೆಡ್ಡಿಂಗ್ ಗಿಫ್ಟ್‌ನಲ್ಲಿ ಎರಡು ಶೇಡ್‌ಗಳಿರುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದುವರೆಗಿನ ಸಿನಿಮಾ ಯಾನದಲ್ಲಿ ತಮ್ಮನ್ನು ಮೆಚ್ಚಿಕೊಂಡು ಬಂದ ಪ್ರೇಕ್ಷಕರಿಗೆಲ್ಲ ಈ ಹೊಸಾ ಅವತಾರವೂ ಮೆಚ್ಚುಗೆಯಾಗುತ್ತದೆಂಬ ಗಾಢ ನಂಬಿಕೆ ಅವರಲ್ಲಿದೆ.
ಇದು ವಿಕ್ರಂ ಪ್ರಭು ನಿರ್ದೇಶನದ ಚೊಚ್ಚಲ ಚಿತ್ರ. ಸಮಾಜಕ್ಕೆ ಕಣ್ಣಾಗುವ, ಎಲ್ಲರ ಬದುಕಿಗೂ ಹತ್ತಿರಾಗುವ ಕಥಾನಕವನ್ನೊಳಗೊಂಡಿದ್ದ ಈ ಚಿತ್ರದ ನಾಯಕಿ ಯಾರಾಗಬೇಕೆಂಬುದೇ ಮೊದಲು ಯಕ್ಷ ಪ್ರಶ್ನೆಯಾಗಿತ್ತಂತೆ. ನಾಯಕಿ ಅಂದಾಕ್ಷಣ ಪಾಸಿಟಿವ್ ರೋಲ್‌ಗಳೇ ಕಣ್ಣಮುಂದೆ ಬರುತ್ತವೆ. ಆದರೆ ಈ ಪಾತ್ರಕ್ಕೆ ನಗೆಟಿವ್ ಶೇಡೂ ಇತ್ತು. ಅದನ್ನು ನಿರ್ವಹಿಸೋದಕ್ಕೆ ಸೋನು ಗೌಡ ಅವರೇ ಸೂಕ್ತ ಎಂಬ ನಿರ್ಣಯಕ್ಕೆ ಬಂದಿದ್ದ ನಿರ್ದೇಶಕರಿಗೆ, ಸೋನು ಕಡೆಯಿಂದ ಎಂಥಾ ಪ್ರತಿಕ್ರಿಯೆ ಬಂದೀತೆಂಬ ಆತಂಕವಿತ್ತಂತೆ. ಆದರೆ ಕಡೆಗೂ ಕಥೆ ಕೇಳಿದ ಸೋನು ಗೌಡರಿಗೆ ಬಹುವಾಗಿ ಇಷ್ಟವಾಗಿ ಬಿಟ್ಟಿತ್ತು.
ಈ ಕಥೆ ಮತ್ತು ತಮ್ಮ ಪಾತ್ರ ಹಿಡಿಸಿದಾಕ್ಷಣವೇ ಸೋನು ಗೌಡ ಸ್ಕ್ರಿಪ್ಟ್ ಕೇಳಿದ್ದರಂತೆ. ಎಲ್ಲವನ್ನೂ ಓದಿ ಮನನ ಮಾಡಿಕೊಂಡ ಅವರಿಗೆ ಇದೊಂದು ಭಿನ್ನ ಚಿತ್ರವಾಗಿ ನೆಲೆಗಾಣುತ್ತದೆಂಬ ಭರವಸೆ ಮೂಡಿಕೊಂಡಿತ್ತು. ಅದಾದೇಟಿಗೆ ಮರುಮಾತನಾಡದೇ ಖುಷಿಯಿಂದಲೇ ಆ ಪ್ರಾತ್ರಕ್ಕೆ ಒಪ್ಪಿಗೆ ಸೂಚಿಸಿದ್ದರಂತೆ. ಆದರೆ ಚಿತ್ರೀಕರಣ ಶುರುವಾದಾಗ ಹೆಜ್ಜೆ ಹೆಜ್ಜೆಗೂ ಅವರನ್ನು ಆತಂಕ ಕಾಡಿತ್ತಂತೆ. ಆ ಪಾತ್ರವನ್ನು ಆವಾಹಿಸಿಕೊಳ್ಳುವುದಕ್ಕೆ ಭಯವೂ ಆಗಿತ್ತಂತೆ. ಜಗತ್ತಿನಲ್ಲಿ ಇಂಥವರೂ ಇರುತ್ತಾರಾ ಎಂಬ ಪ್ರಶ್ನೆಯನ್ನು ಅವರಿಗವರೇ ಕೇಳಿಕೊಳ್ಳುವಂತೆಯೂ ಆಗಿತ್ತಂತೆ. ಆದರೂ ಈ ಸಮಾಜಕ್ಕೆ ಆ ಪಾತ್ರದ ಕಡೆಯಿಂದೊಂದು ಸಂದೇಶವಿದೆ ಎಂಬ ಕಾರಣದಿಂದ ಅವರು ಖುಷಿಯಾಗಿಯೇ ಅದಕ್ಕೆ ನ್ಯಾಯ ಸಲ್ಲಿಸಿದ್ದರಂತೆ.
ಸಾಮಾನ್ಯವಾಗಿ ಯಾರೇ ನಟ ನಟಿಯರಾದರೂ ಏಕಾಏಕಿ ನೆಗೆಟೀವ್ ರೋಲ್ ಅಂದಾಕ್ಷಣ ಹಿಂದೇಟು ಹಾಕುತ್ತಾರೆ. ಆನ ಅದನ್ನು ಹೇಗೆ ಸ್ವೀಕರಿಸಬಹುದೆಂಬ ಅಳುಕು ಯಾರಿಗಾದರೂ ಕಾಡುತ್ತೆ. ಆದರೆ ವೆಡ್ಡಿಂಗ್ ಗಿಫ್ಟ್‌ನ ಕಥೆ ಗಟ್ಟಿಯಾಗಿದ್ದುದರಿಂದಾಗಿ ಅಂಥಾ ಯಾವ ಗೊಂದಲಗಳೂ ಸೋನು ಗೌಡರನ್ನು ಕಾಡಲಿಲ್ಲವಂತೆ. ತಮ್ಮನ್ನು ಇಷ್ಟ ಪಡುವ ಜನರೆಲ್ಲರೂ ಈ ಪಾತ್ರವನ್ನೂ ಕೂಡಾ ಮೆಚ್ಚಿಕೊಳ್ಳುತ್ತಾರೆಂಬ ಗಾಢ ನಂಬಿಕೆ ಅವರಲ್ಲಿದೆ. ಈ ಚಿತ್ರದಲ್ಲಿ ಪ್ರತಿಭಾವಂತ ನಟ ನಟಿಯರ ತಾರಾಗಣ ಸೋನುಗೆ ಜೊತೆಯಾಗಿದೆ. ನಾಯಕನಾಗಿ ನಿಶಾನ್ ನಟಿಸಿದ್ದರೆ, ಅಚ್ಯುತ್ ರಾವ್ ಮತ್ತು ಪ್ರೇಮಾ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಪವಿತ್ರಾ ಲೋಕೇಶ್ ಕೂಡಾ ಮಹತ್ವದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರ ಇದೇ ಜುಲೈ ೮ರಂದು ತೆರೆಗಾಣಲಿದೆ.