ರಾಜಮೌಳಿ ಮತ್ತು ಜ್ಯೂನಿಯರ್ ಎನ್ಟಿಆರ್ ಕಾಂಭಿನೇಷನ್ನಿನ ಆರ್ ಆರ್ ಆರ್ ಚಿತ್ರ ಭರ್ಜರಿ ಗೆಲುವು ದಾಖಲಿಸಿದೆ. ಇದರ ಬೆನ್ನಲ್ಲಿಯೇ ಜ್ಯೂನಿಯರ್ ಎನ್ಟಿಆರ್ ಮುಂದಿನ ನಡೆ ಏನು? ಅವರು ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆಂಬ ಕೌತುಕವೂ ಹಬ್ಬಿಕೊಂಡಿದೆ. ಅದಕ್ಕೆ ಇತ್ತೀಚಿನ ದಿನಗಳಲ್ಲಿ ಉತ್ತರದ ಸುಳಿವು ದೊರೆತಿತ್ತು. ಅವರ ಮುಂದಿನ ಚಿತ್ರವನ್ನು ಖ್ಯಾತ ನಿರ್ದೇಶಕ ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆಂಬ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಅಲ್ಲಿಗೆ ಈ ಹೊಸಾ ಚಿತ್ರದ ಬಗ್ಗೆಯೂ ಭರ್ಜರಿ ನಿರೀಕ್ಷೆಗಳು ಚಾಲೂ ಆದಂತಾಗಿವೆ.
ಜ್ಯೂನಿಯರ್ ಎನ್ಟಿಆರ್ರಂಥಾ ನಟರ ಸಿನಿಮಾವೊಂದು ಶುರುವಾಗುತ್ತದೆಯೆಂದರೆ ಅದರ ಸುತ್ತ ನಾನಾ ಊಹಾಪೋಹಗಳು ಹರಳುಗಟ್ಟಿಕೊಳ್ಳಲಾರಂಭಿಸುತ್ತವೆ. ಇನ್ನೂ ಚಿತ್ರದ ಬಗ್ಗೆ ಏನೆಂದರೆ ಏನೂ ಮಾಹಿತಿಗಳು ಹೊರ ಬೀಳದಿದ್ದರೂ ಕೂಡಾ ಪಾತ್ರವರ್ಗ, ತಾಂತ್ರಿಕ ವರ್ಗದ ಬಗೆಗೆಲ್ಲ ಕಪೋಲಕಲ್ಪಿತ ಸುದ್ದಿಗಳು ಹೊರ ಬೀಳಲಾರಂಭಿಸುತ್ತವೆ. ಇಂಥಾ ಸುದ್ದಿಗಳನ್ನು ಸುಮ್ಮನೆ ದಿಟ್ಟಿಸುತ್ತಿರೋದೇ ಒಂದು ಚೆಂದ. ಆದರೆ ಈ ಸೆಲೆಬ್ರಿಟಿಗಳ ವಿಚಾರದಲ್ಲಿ ಹಾಗಾಗೋದಿಲ್ಲ. ಯಾವುದೇ ಕಲಾವಿದರು ಒಂದು ಚಿತ್ರದ ಭಾಗವಾಗುತ್ತಾರೆಂಬ ಸುದ್ದಿ ಹೊರ ಬಿದ್ದಾಕ್ಷಣ ಮಾಧ್ಯಮದ ಮಂದಿ ಆ ಬಗ್ಗೆ ಪ್ರಶ್ನೆ ಕೇಳಲಾರಂಭಿಸುತ್ತಾರೆ. ಈಗ ಅಂಥಾದ್ದೇ ಒಂದು ಪ್ರಶ್ನೆ ನಟಿ ಸೊನಾಲಿ ಬೇಂದ್ರೆಗೂ ಎದುರಾಗಿ ಬಿಟ್ಟಿದೆ!
ಜ್ಯೂನಿಯರ್ ಎನ್ಟಿಆರ್ ಜೊತೆಗೆ ಹೊಸಾ ಚಿತ್ರದಲ್ಲಿ ಸೊನಾಲಿ ನಟಿಸಲಿದ್ದಾರೆಂದು ಹಬ್ಬಿಕೊಂಡಿರೋ ರೂಮರ್ ಅದಕ್ಕೆ ಕಾರಣ. ಈ ಬಗ್ಗೆ ಯಾವ ಪರಿಯಾಗಿ ಸುದ್ದಿ ಹಬ್ಬಿಕೊಂಡಿತ್ತೆಂದರೆ ಸೊನಾಲಿ ನಟಿಸುತ್ತಿರೋದು ನಿಜವೆಂದೇ ಹೆಚ್ಚಿನವರು ಅಂದುಕೊಂಡಿದ್ದರು. ಆದರೀಗ ಖುದ್ದು ಸೋನಾಲಿ ಬೇಂದ್ರೆಯೇ ಇದೊಂದು ಫೇಕ್ ನ್ಯೂಸ್ ಅಂದಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗೆಗಿನ ಪ್ರಶ್ನೆ ಎದುರಾದಾಗ ಸೊನಾಲಿ ನೇರವಾಗಿಯೇ ಉತ್ತರಿಸಿದ್ದಾರೆ. ಇದೊಂದು ಸುಳ್ಳು ಸುದ್ದಿ, ಜ್ಯೂನಿಯರ್ ಎನ್ಟಿಆರ್ ಚಿತ್ರದ ಬಗ್ಗೆ ತನಗೆ ಯಾವ ಮಾಹಿತಿಯೂ ಇಲ್ಲ ಅಂತ ಸೊನಾಲಿ ಸ್ಪಷ್ಟಪಡಿಸಿದ್ದಾರೆ.
ಸೊನಾಲಿ ಜ್ಯೂನಿಯರ್ ಎನ್ಟಿಆರ್ ಚಿತ್ರದಲ್ಲಿ ನಟಿಸುತ್ತಿರೋದು ಸುಳ್ಳಾದರೂ ಆಕೆಯೀಗ ಫುಲ್ ಆಕ್ಟಿವ್ ಆಗಿದ್ದಾರೆ. ಆಕೆಯ ಬದುಕಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ಎಂಬುದು ಭರ್ಜರಿಯಾಗಿಯೇ ಶುರುವಾಗಿಬಿಟ್ಟಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಸೊನಾಲಿ ಮಾರಕ ಕ್ಯಾನ್ಸರ್ಗೆ ತುತ್ತಾಗಿದ್ದರು. ಆ ಹೊತ್ತಿನಲ್ಲಿ ಬದುಕಿ ಬರುವ ಯಾವ ಹೋಪ್ ಕೂಡಾ ಇರಲಿಲ್ಲ. ಕಡೆಗೂ ಕ್ಯಾನ್ಸರ್ನೊಂದಿಗೆ ಹೋರಾಡಿ ಗೆದ್ದು ಬಂದಿರುವ ಸೊನಾಲಿ ಮತ್ತೆ ಬಣ್ಣ ಹಚ್ಚಿದ್ದಾರೆ. ಇದೀಗ ಚೆಂದದ ವೆಬ್ ಸೀರೀಸ್ ಒಂದರಲ್ಲಿ ನಟಿಸುತ್ತಿರೋ ಆಕೆಗೆ ಸಿನಿಮಾ ರಂಗದ ಕಡೆಯಿಂದಲೂ ಬಹು ಬೇಡಿಕೆ ಇದ್ದೇ ಇದೆ.