ಕನ್ನಡ ಚಿತ್ರರಂಗದ ಮಟ್ಟಿಗಿದು ಹೊಸಾ ಅನ್ವೇಷಣೆಯ ಪರ್ವ ಕಾಲ. ಅದಾಗಲೇ ಆ ದಿಸೆಯಲ್ಲಿ ತಯಾರುಗೊಂಡಿರುವ ಒಂದಷ್ಟು ಸಿನಿಮಾಗಳು ತೆರೆಗಾಣಲು ಸಜ್ಜಾಗಿವೆ. ಮತ್ತೊಂದಷ್ಟು ಸಿನಿಮಾಗಳು ಕೊರೋನಾ ಕಂಟಕದಿಂದ ಸಾಕಷ್ಟು ಪಡಿಪಾಟಲು ಪಟ್ಟು, ಎಲ್ಲ ಸವಾಲುಗಳನ್ನೂ ಮೀರಿಕೊಂಡು, ಸಾವರಿಸಿಕೊಂಡು ಇದೀಗ ಸಿನಿಮಾ ಮಂದಿರಗಳತ್ತ ಮುಖ ಮಾಡಿವೆ. ಅಂಥಾ ಸಿನಿಮಾಗಳಲ್ಲಿ ನಿಸ್ಸಂದೇಹವಾಗಿಯೂ `ನಾಕು ಮುಖ’ ಸೇರಿಕೊಳ್ಳುತ್ತದೆ. ಪ್ರತಿಭಾನ್ವಿತರಾದ ಕುಶನ್ ಗೌಡ ನಿರ್ದೇಶನ ಮಾಡಿ ನಟಿಸಿರುವ ಈ ಸಿನಿಮಾ ನಿಮ್ಮ ಮುಂದೆ ಅವತರಿಸಲು ಕೆಲವೇ ಘಂಟೆಗಳು ಮಾತ್ರವೇ ಬಾಕಿ ಉಳಿದುಕೊಂಡಿವೆ.
ಹಾಗೆ ನೋಡಿದರೆ, ಕಲಾ ಜಗತ್ತಿನ ಒಂದೊಂದು ವಿಭಾಗಗಳಲ್ಲಿ ಪಳಗಿಕೊಳ್ಳುವುದೇ ಕಷ್ಟ. ಅದನ್ನು ನಿಭಾಯಿಸುವುದೂ ಕೂಡಾ ತ್ರಾಸದಾಯಕ ಕೆಲಸ. ಅಂಥಾದ್ದರಲ್ಲಿ ಬರವಣಿಗೆ, ನಿರ್ದೇಶನ ಮತ್ತು ನಟನೆಗೂ ರೆಡಿ ಅಂತ ನಿಂತು ಬಿಡುವುದೊಂದು ದುಃಸ್ಸಾಹಸ. ಅದು ಕೆಲವೇ ಕೆಲ ಮಂದಿಗೆ ಮಾತ್ರವೇ ಸಾಧ್ಯವಾಗುತ್ತೆ. ಸಿಕ್ಕ ಸಿಕ್ಕವ ತಲೆ ಸವರಿ ಅವರಿಂದ ಟ್ರಿಮ್ ಮಾಡಿಸಿಕೊಂಡು ಕಥೆಗಾರರೆನ್ನಿಸಿಕೊಳ್ಳುವ ತಲುಬು ಹೊಂದಿರುವವರು, ಬರಹಗಾರ ಅನ್ನಿಸಿಕೊಳ್ಳುವ ಹುಚ್ಚಿರುವವರು ಮತ್ತು ನಿರ್ದೇಶನದ ಕನಸು ಕಾಣುವವರು ಗಾಂಧಿನಗರದ ಗಲ್ಲಿಗಳಲ್ಲಿ ಪಿತಗುಡುತ್ತಾರೆ. ಆದರೆ, ನಿಜಕ್ಕೂ ಆ ಕಸುವಿರುವವರ ಸಂಖ್ಯೆ ಕಡಿಮೆ ಇದೆ. ಅಂಥಾ ಶಕ್ತರ ಸಾಲಿನಲ್ಲಿ ಕುಶನ್ ಗೌಡ ಕೂಡಾ ಸೇರಿಕೊಳ್ಳುತ್ತಾರೆ.
ಮಡುಇಕೇರಿಯ ಐಕೊಳ ಗ್ರಾಮದವರಾದ ಕುಶನ್ ಗೌಡ ಶಾಲಾ ಕಾಲೇಜು ವ್ಯಾಸಂಗವನ್ನೆಲ್ಲ ಅಲ್ಲಿಯ ವಾತಾವರಣದಲ್ಲಿಯೇ ಮುಗಿಸಿಕೊಂಡಿದ್ದರು. ಹಾಗೆ ಶಾಲಾ ಕಾಲೇಜು ವ್ಯಾಸಂಗದ ದಿನಗಳಲ್ಲಿಯೇ ನಾಟಕಗಳನ್ನು ಬರೆದು, ನಿರ್ದೇಶನ ಮಾಡಿ ನಟಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದರು. ಓರಗೆಯವರ ನಡುವ ಭಿನ್ನವಾಗಿ ಗುರುತಿಸಿಕೊಂಡಿದ್ದರು. ಆ ಕಾಲದಲ್ಲಿಯೇ ಶಂಕರ್ ನಾಗ್ ಅವರ ವೀರಾಭಿಮಾನಿಯಾಗಿದ್ದ ಕುಶನ್, ಅವರಂತೆತೆಯೇ ನಟನಾಗಿ ನೆಲೆ ಕಂಡುಕೊಳ್ಳಬೇಕೆಂಬ ಕನಸನ್ನೂ ಸಾಕಿಕೊಂಡಿದ್ದರು. ಅದಕ್ಕಾಗಿ ಸಜ್ಜುಗೊಂಡು, ತನ್ನ ಬದುಕೇನಿದ್ದರೂ ಚಿತ್ರರಂಗದಲ್ಲಿಯೇ ಅಂತೊಂದು ಗುರಿ ಸಿದ್ಧಪಡಿಸಿಕೊಂಡಿದ್ದ ಅವರು ಬೆಂಗಳೂರಿಗೆ ಬಂದಿಳಿದಿದ್ದರು.
ಹಾಗೆ ಬಂದವರು ಸೀರಿಯಲ್ಲು, ಸಿನಿಮಾ ಚಿತ್ರೀಕರಣ ನಡೆಯೋ ಜಾಗೆಗಳಿಗೆ ಎಡತಾಕುತ್ತಾ ಅವಕಾಶಕ್ಕಾಗಿ ಅಲೆಯಲಾರಂಭಿಸಿದ್ದರು. ಅಂಥಾ ಧ್ಯಾನಕ್ಕೆ ಚಿಕ್ಕಪುಟ್ಟ ಅವಕಾಶಗಳು ಸಿಕ್ಕರೂ ಅದನ್ನು ಒಪ್ಪ ಓರಣವಾಗಿ ಬಳಸಿಕೊಳ್ಳಲಾರಂಭಿಸಿದ್ದರು. ಈ ರೀತಿಯಲ್ಲಿ ಸಾಕಷ್ಟು ವರ್ಷಗಳ ಕಾಲ ಪಳಗಿಕೊಂಡು, ಚೆಂದದ್ದೊಂದು ಕಥೆಯನ್ನು ಸಿದ್ಧಪಡಿಸಿಕೊಂಡು ಅವರು ಕಡೆಗೂ `ನಾಕು ಮುಖ’ ಚಿತ್ರವನ್ನು ರೂಪಿಸಿದ್ದಾರೆ. ಈಗಾಗಲೇ ಟೀಸರ್, ಟ್ರೈಲರ್ ಮೂಲಕ ಅಗಾಧ ಪ್ರಮಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಈ ಚಿತ್ರ ಇನ್ನು ಕೆಲವೇ ಗಂಟೆಗಳಲ್ಲಿ ನಿಮ್ಮ ಮುಂದೆ ಬರಲಿದೆ. ಅದು ಹೊಸಾ ಅನುಭೂತಿಯೊಂದನ್ನು ನೋಡುಗರೆಲ್ಲರ ಎದೆತುಂಬಿ, ಗೆಲುವನ್ನು ತನ್ನದಾಗಿಸಿಕೊಳ್ಳುತ್ತದೆಯೆಂಬ ಗಾಢ ನಂಬುಗೆ ಕುಶನ್‍ರಲ್ಲಿದೆ. ಅದು ನಿಜವಾಗಲೆಂಬುದು ನಮ್ಮ ಹಾರೈಕೆ!