ನಿನ್ನ ನತ್ತಿನ ಮಿಂಚಿಗೆ, ತುಟಿಯಂಚಿನ ಮಾರ್ಧವತೆಗೊಂದು ಹೂ ಮುತ್ತು. ಕಾಲವೆಂಬುದು ಅದೆಷ್ಟು ಸುತ್ತು ಹಾಕಿದರೂ, ಸಂವತ್ಸರಗಳೆಲ್ಲ ಅದಲು ಬದಲಾದರೂ ನಿನ್ನ ಬದುಕಲ್ಲಿ ಇಂಥಾ ಖುಷಿಯೇ ಗೂಡುಗಟ್ಟಲಿ ಅಂತ ನಾನೆಂದೂ ನಂಬದ ದೇವರಿಗೂ ಒಂದು ಅಪೀಲು ಹಾಕಿಯೇನು… ಯಾಕಂದ್ರೆ, ದಿಕ್ಕುದೆಸೆಯಿಲ್ಲದ ತಿರುಕನಂಥಾ ಈ ಬದುಕಿನ ಶಾಶ್ವತ ಗುರಿಯಂಥವಳು ನೀನು. ಸುಮ್ಮನೆ ಸರಿದು ಹೋಗುವ ಸಕಲ ಸಂವತ್ಸರಗಳೂ ಕೂಡಾ ನನ್ನನ್ನಿಲ್ಲಿ ಕಾಡಿಸುತ್ತಿವೆ, ಕಂಗಾಲಾಗಿಸುತ್ತಿವೆ. ಆದರೆ ಇಂಥಾ ಕ್ಷಣಗಳಲ್ಲೆಲ್ಲ ನಿನ್ನ ಖುಷಿಯನ್ನಷ್ಟೇ ಧ್ಯಾನಿಸುತ್ತ ಅದನ್ನೇ ಆವಾಹಿಸಿಕೊಂಡು ಬದುಕೋದನ್ನು ರೂಢಿಸಿಕೊಂಡಿದ್ದೇನೆ. ನಿನ್ನ ದಯೆಯಿಂದಲೇ ನಾನಿಲ್ಲಿ ಹಾಯಾಗಿದ್ದೇನೆ.
ಆದರೆ ಈ ಬೇಸಗೆ ಮತ್ತು ಸುಡು ಸುಡುವ ಬಿಸಿಲೆಂದರೆ ನಂಗ್ಯಾಕೋ ರೇಜಿಗೆ. ಇಂಥಾ ಬೇಸಗೆಯ ಸಂಜೆಗಳಿಗೆ ಮಾತ್ರವೇ ನಾನು ಮುದಗೊಳ್ಳುತ್ತೇನೆ. ಇಂಥಾ ಆರ್ದ್ರ ಸಂಜೆಗಳಿಗೆ ನಿನ್ನ ಜೊತೆಯಿರಬೇಕಿತ್ತೆಂದು ಹಲುಬಾಡುತ್ತೇನೆ. ಆಶದರೇಕೋ ಇತ್ತೀಚೆಗೆ ಇಂಥಾ ಬೇಸಗೆಗಳೂ ಕೂಡಾ ಇಡಿ ಇಡಿಯಾಗಿ ಇಷ್ಟವಾಗುತ್ತಿವೆ. ಯಾಕೋ ಈ ಕಡು ಬೇಸಗೆಗೂ ಸುಡು ಸುಡುವ ನೆನಪುಗಳಿಗೂ ಇತ್ತಿತ್ತಲಾಗಿ ಒಲವಾದಂತಿದೆ!
ಇದೊಂಥರಾ ತ್ರಿಶಂಕು ಸ್ಥಿತಿ. ಎದೆಯ ತಲ್ಲಣಗಳನ್ನು ಅಲ್ಲೇ ಇಟ್ಟುಕೊಂಡರೆ ಹುಚ್ಚು ಹಿಡಿದೀತೆಂಬ ಭಯವಾಗಿ ಯಾರ ಮುಂದಾದರೂ ಹೇಳಿಕೊಂಡು ನಿಸೂರಾಗೋಣವೆಂದರೆ ಹುಚ್ಚ ಅಂತ ನಕ್ಕು ಬಿಡುತ್ತಾರೇನೋ ಎಂಬ ಭಯ. ವರ್ಷಾನುಗಟ್ಟಲೆಯಿಂದ ನಿನ್ನನ್ನ ಈ ಪರಿ ಪ್ರಾಣದಂತೆ ಪ್ರೀತಿಸಿ, ಪ್ರತೀಕ್ಷಣ ನಿಂಗಾಗೇ ಹಪಾಹಪಿಸುತ್ತಿದ್ದೇನಲ್ಲಾ… ಇದನ್ನೆಲ್ಲ ಬೇರೆಯವರ ಮುಂದೆ ಹೇಳಿಕೊಂಡರೆ ‘ನೀ ಅವ್ಳತ್ರ ಹೇಳ್ಲಿಲ್ವಾ’ ಅಂತಾರೆ. ಇಲ್ಲ ಅಂದೇಟಿಗೆ ಥರ ಥರದ ಪ್ರವಚನ ಶುರು. ಒಂದೇ ಒಂದು ಮಾತಾಡದೆ ಇದೆಂಥಾ ಪ್ರೀತಿ ಎಂಬಂಥಾ ಜಿಜ್ಞಾಸೆಯೂ ಹೊತ್ತಿಕೊಂಡೀತು. ಆ ಒಡ್ಡೋಲಗದ ನಡುವೆ ಈ ಮನಸಿನ ದಿಗಂತದಲ್ಲಿ ಸದಾ ಮಿಣುಕುತ್ತಿರುವ ಆಶಾವಾದವೂ ಮಬ್ಬಾದಂತೆ ಕಂಡು ಕಂಗಾಲಾಗಬೇಕಾಗುತ್ತದೆ. ಆದುದರಿಂದಲೇ ಹೀಗೊಂದು ಪತ್ರ ಬರೆದು ನಿಸೂರಾಗೋದೇ ನನ್ನಂಥವರ ಪಾಲಿಗೆ ಒಳ್ಳೆಯ ಮಾರ್ಗ!
ವಿಚಾರ ಯಾವುದೇ ಇರಲಿ, ಹೇಳಬೇಕನ್ನಿಸಿದನ್ನು ಬೇಗನೆ ಹೇಳಿ ಬಿಡಬೇಕು ಅಂತ ಎಲ್ಲಿಯೋ ಓದಿದ ನೆನಪು. ಯಾಕೋ ಈ ಮಾತೀಗ ನಿಜ ಅನ್ನಿಸ್ತಿದೆ. ಆದರೆ ನೀನು ಬಾಲ್ಕನಿ, ನನ್ನದು ಗಾಂಧಿ ಸೀಟಿಗೂ ತಗ್ಗಿನಲ್ಲಿರೋ ಫುಟ್ಪಾತು. ಆದುದರಿಂದಲೇ ನಿಂಗೆ ಕೊಂಚವಾದರೂ ಅರ್ಹನಾಗಬೇಕಂತಲೇ ಕಾದೆ. ಅದಕ್ಕಾಗಿ ಅಹರ್ನಿಶಿ ಪ್ರಯತ್ನಿಸಿದೆ. ಆದರೆ ವಿಧಿ ದಿನಾ ನಿನ್ನ ಮುಖ ನೋಡೋ ಅವಕಾಶವನ್ನೂ ಅನ್ಯಾಯವಾಗಿ ಕಸಿದುಕೊಂಡಿದೆ. ನಿನ್ನ ನೋಡಲೇಬೇಕೆಂಬ ತುಡಿತ ಒತ್ತರಿಸಿದಾಗೆಲ್ಲ ಎದುರಿದ್ದಾಗ ಮೀನಾಮೇಷ ಎಣಿಸಿದ ನನ್ನ ಬಗ್ಗೆ ನನಗೇ ಸಿಟ್ಟು ಉಕ್ಕುತ್ತೆ.
ಈ ಬದುಕಿನ ಅಗಾಧ ವಿಸ್ತಾರದಲ್ಲಿ ಕಳೆದು ಹೋಗಿರೋ ನನ್ನೊಲವು ಯಾವತ್ತಾದರೂ ಸಿಕ್ಕೇ ಸಿಗುತ್ತದೆಯೆಂಬ ಆಶಾವಾದವನ್ನ ಎದೆಯಲ್ಲಿ ಬಚ್ಚಿಟ್ಟುಕೊಂಡೇ ಬದುಕುತ್ತಿದ್ದೇನೆ. ಆ ಭರವಸೆಯ ಪಸೆ ಆರಿದ ದಿವಸ ಈ ಉಸಿರಿನ ಹಣತೆಯೂ ಆರುತ್ತೆ. ಆದರೂ ಆ ನಿನ್ನ ಮುಗುಳ್ನಗು, ಕಣ್ಣ ಕೀಟಲೆ, ಕಾಡಿಸುವ ಬಗೆ ಬಗೆಗಳೆಲ್ಲ ಕಡೇತನಕ ನೆನಪಿರುತ್ತೆ. ಅದೆಲ್ಲವೂ ಜನುಮ ಪೂರ್ತಿ ನನ್ನದಾಗುತ್ತೆ, ಎಲ್ಲವನ್ನೂ ನಿನ್ನೆದುರು ಒದರಿ ನಿರಾಳವಾಗೋ ಕಾಲ ಬಂದೇ ಬರುತ್ತದೆಂಬ ನಂಬಿಕೆಯೂ ಇದೆ. ಕಾಲವೆಂಬೋ ಕಾಲ ಅದೆಷ್ಟೇ ಕಂಗಾಲು ಮಾಡಿದರೂ ನಿಂಗಾಗಿ ಕಾಯೋ ಆತ್ಮಬಲವೂ ಇದೆ. ಒಂದಿಇಡೀ ಬದುಕನ್ನೇ ನಿನ್ನ ನೆನಪುಗಳನ್ನಷ್ಟೇ ನೆರಳಾಗಿಸಿಕೊಂಡು ಬದುಕಿ ಬಿಡಬಲ್ಲೆ ನಾನು. ಆದರೆ ಅಂಥಾದ್ದೊಂದು ನರಕಸುಖವನ್ನು ನೀ ನಂಗೆ ಕೊಡಬೇಡ. ಈ ಕಡು ಬೇಸಗೆ ಕಳೆದು, ಯುಗಾದಿ ಹೊರಳಿಕೊಂಡು ಮುಂಗಾರಿನ ಮೂಗುತ್ತಿ ಫಳಗುಡುವ ಹೊತ್ತಿಗಾದರೂ ನೀ ಈ ಬದುಕಿಗೆ ಅಡಿಯಿಡುತ್ತಿಯೆಂಬೋ ಹುಚ್ಚು ನಂಬಿಕೆಯಿಂದಲೇ ಬದುಕಿದ್ದೇನೆ. ಆ ಕ್ಷಣಕ್ಕಾಗಿ ಸದಾ ಹಂಬಲಿಸುತ್ತಾ…
– ನಿನ್ನವನು