ನಾವು ಯಾವುದನ್ನು ಸಾಧ್ಯವೇ ಇಲ್ಲ ಅಂತ ತೀರ್ಮಾನಿಸಿಕೊಂಡಿರುತ್ತೇವೋ, ನಾವು ಯಾವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲವೋ ಅಂಥವನ್ನೆಲ್ಲ ಸಾಧ್ಯವಾಗಿಸೋ ಛಾತಿ ಪ್ರಕೃತಿಗಿದೆ. ಅದಕ್ಕೆ ಉದಾಹರಣೆ ಎಂಬಂತೆ ತುಂಬಾನೇ ವಿಚಿತ್ರ ಅನ್ನಿಸುವಂಥಾ ಪ್ರಾಣಿ ಪಕ್ಷಿಗಳು, ಒಂದಷ್ಟು ಪ್ರದೇಶಗಳೂ ನಮ್ಮ ಸುತ್ತಲಿವೆ. ಅಂಥಾ ಪ್ರಕೃತಿಯ ಮಾಯೆಗೆ ಊಸರವಳ್ಳಿಯೊಂದು ಸೂಕ್ತ ಉದಾಹರಣೆ. ಅದು ನೋಡ ನೋಡುತ್ತಲೇ ದೇಹದ ಬಣ್ಣ ಬದಲಿಸೋದಕ್ಕೆ ಫೇಮಸ್ಸು. ಆದರೆ ತಣ್ಣಗೆ ಹರಿಯೋ ನದಿಯೊಂದು ಬಣ್ಣ ಬದಲಿಸುತ್ತೆ ಅಂದ್ರೆ ನಂಬ್ತೀರಾ?
ಊಸರವಳ್ಳಿ ಕ್ಷಣಕ್ಕೊಂದು ಬಣ್ಣ ಬದಲಿಸುತ್ತೆ. ಅದಕ್ಕೇ ಪ್ರತಿಸ್ಪರ್ಧೆ ಕೊಡುವಂತೆ ಅದೊಂದು ನದಿ ಬಣ್ಣ ಬದಲಾಯಿಸಿಕೊಳ್ಳುತ್ತದೆಯಂತೆ. ಅದು ಕ್ರಿಸ್ಟಲ್ ರಿವರ್. ಅದಿರೋದು ದಕ್ಷಿಣ ಅಮೆರಿಕಾದ ಕೊಲಂಬೋದಲ್ಲಿ. ಆ ನದಿಯ ವಿಶೇಷತೆಯನ್ನು, ಬಣ್ಣದ ಬೆರಗುಗಳನ್ನು ಕಣ್ತುಂಬಿಕೊಳ್ಳಲೆಂದೇ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ತದೇಕಚಿತ್ತದಿಂದ ಆ ನದಿಯ ನೀರನ್ನೇ ದಿಟ್ಟಿಸುತ್ತಾ ಅದರ ಬಣ್ಣ ಬದಲಾಗೋ ಪರಿ ಕಂಡು ತಮ್ಮನ್ನು ತಾವೇ ಚಿವುಟಿ ನೋಡಿಕೊಳ್ಳುವಷ್ಟರ ಮಟ್ಟಿಗೆ ರೋಮಾಂಚಿತರಾಗ್ತಾರೆ.
ಒಂದು ಮಟ್ಟಿಗೆ ದೊಡ್ಡದಾದ ಆ ನದಿ ನಿಜಕ್ಕೂ ಸಜೀವ ನಿಗೂಢ. ಆ ನದಿ ನೀರ ಬಣ್ಣಗಳು ಕಣ್ಣ ಮುಂದೆಯೇ ಬದಲಾಗುತ್ತವೆ. ಆದರೂ ಅದು ನಿಗೂಢದಂತೆ ಕಾಡುತ್ತದೆ. ಅಂದಹಾಗೆ ಸದರಿ ನದಿ ಕೆಂಪು, ಹಳದಿ, ನೀಲಿ ಸೇರಿದಂತೆ ಐದು ಬಣ್ಣಗಳನ್ನು ಬದಲಾಯಿಸುತ್ತೆ. ಹಾಗಂತ ವರ್ಷ ಪೂರ್ತಿಯೂ ಈ ಬಣ್ಣಗಳ ಲಾಸ್ಯ ನೋಡಲು ಸಿಗೋದಿಲ್ಲ. ಸೆಪ್ಟೆಂಬರ್ ತಿಂಗಳಿಂದ ನವೆಂಬರ್ ವರೆಗೆ ಮಾತ್ರವೇ ಈ ನದಿ ಬಣ್ಣ ಬದಲಿಸುತ್ತೆ. ಮಿಕ್ಕುಳಿದ ತಿಂಗಳುಗಳಲ್ಲಿ ಇತರೇ ನದಿಗಳಂತೆಯೇ ಕಾಣಿಸುತ್ತದೆಯಂತೆ.