ಬರೀ ಪ್ಯಾನಿಂಡಿಯಾ ಮಟ್ಟದ ಸಿನಿಮಾಗಳು ಮಾತ್ರವಲ್ಲ; ಯಾರೂ ಮುಟ್ಟದ ಪ್ರಯೋಗಾತ್ಮಕ ಗುಣಗಳ ಸಿನಿಮಾಗಳು ಕೂಡಾ ಚಿತ್ರರಂಗದ ಏಳಿಗೆಯ ದೃಷ್ಟಿಯಿಂದ ಬಹು ಮುಖ್ಯ. ಖುಷಿಯ ವಿಚಾರವೆಂದರೆ, ಕನ್ನಡದಲ್ಲೀಗ ಅಂಥಾ ಪ್ರಯತ್ನಗಳು ಒಂದರ ಹಿಂದೊಂದರಂತೆ ನಡೆಯುತ್ತಿವೆ. ಹಾಗೆ ಭಿನ್ನ ಜಾಡಿನಲ್ಲಿ ರೂಪುಗೊಂಡಿರೋ ಸಿನಿಮಾಗಳ ಸಾಲಿನಲ್ಲಿ ಇದೀಗ ಬಿಡುಗಡೆಗೆ ಸಜ್ಜಾಗಿ ನಿಂತಿರುವ ಚೌಕಬಾರ ಪ್ರಧಾನವಾಗಿ ಗುರುತಿಸಿಕೊಳ್ಳುತ್ತದೆ. ಕಿರುತೆರೆ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಿರುವ, ಅಪಾರ ಪ್ರಮಾಣದಲ್ಲಿ ಅಭಿಮಾನಿ ಬಳಗವನ್ನು ತನ್ನದಾಗಿಸಿಕೊಂಡಿರುವ ವಿಕ್ರಂ ಸೂರಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ವಿಕ್ರಂ ಸೂರಿ ಎಂದಾಕ್ಷಣ ಪ್ರೇಕ್ಷಕರ ಚಿತ್ತದಲ್ಲಿ ತೊಂಬತ್ತರ ದಶಕದ ಆಚೀಚಿಯ ದಿನಮಾನಗಳ ಸೀರಿಯಲ್ ಜಮಾನದ ನೆನಪುಗಳ ರೀಲು ರಿವೈಂಡ್ ಆಗಲಾರಂಭಿಸುತ್ತೆ. ಆ ಕಾಲಘಟ್ಟದ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಮನಸಲ್ಲುಳಿಯುವ ಪಾತ್ರಗಳ ಮೂಲಕ ಮನಗೆದ್ದಿದ್ದವರು ವಿಕ್ರಂ ಸೂರಿ. ದಶಕಗಳ ಮೇಲೆ ದಶಕಗಳು ಮಗುಚಿಕೊಂಡರೂ, ಓರ್ವ ನಟನಾಗಿ ಕಾಲ ಸರಿದರೂ ಸವೆಯದೆ ಉಳಿದ, ಮತ್ತಷ್ಟು ಹೊಳಪುಗಟ್ಟಿಕೊಂಡು ಪ್ರಜ್ವಲಿಸುತ್ತಾ ಸಾಗಿ ಬಂದ ವಿಕ್ರಂ ಇದೀಗ ನ ಇರ್ದೇಶಕನಾಗಿಯೂ ಗಮನ ಸೆಳೆಯುತ್ತಿದ್ದಾರೆ. ಇದೀಗ ಎಲ್ಲೆಡೆ ಕುತೂಹಲ ಮೂಡಿಸಿರುವ ಚೌಕಬಾರ, ಅವರು ನಿರ್ದೇಶನ ಮಾಡಿರುವ ಎರಡನೇ ಚಿತ್ರ.
ಕ್ರಿಯಾಶೀಲ ವ್ಯಕ್ತಿಗಳು ಸಾಮಾನ್ಯವಾಗಿ ಒಂದೇ ಪರಿಧಿಯಲ್ಲಿ ಹೆಚ್ಚು ಕಾಲ ಗಿರಕಿ ಹೊಡೆಯಲಿಚ್ಛಿಸೋದಿಲ್ಲ. ಒಂದು ವೇಳೆ ಅಲ್ಲೇ ಇರಬೇಕಾಗಿ ಬಂದರೂ, ಒಂದಿಲ್ಲೊಂದು ಹೊಸತನಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೆ. ವಿಕ್ರಂ ಸೂರಿ ದಶಕಗಳ ಕಾಲ ಕಿರುತೆರೆ ನಟನಾಗಿ ಮಿಂಚಿದ್ದರ ಹಿಂದೆ ನಿಸ್ಸಂದೇಹವಾಗಿಯೂ ಅಂಥಾ ಮನಃಸ್ಥಿತಿ ಇದೆ. ಈ ನಿಟ್ಟಿನಲ್ಲಿ ನೋಡಿದರೆ, ಅವರು ಏಕಾಏಕಿ ನಿರ್ದೇಶನದತ್ತ ಹೊರಳಿಕೊಂಡಿದ್ದರಲ್ಲಿ ಯಾವ ಅಚ್ಚರಿಯೂ ಕಾಣಿಸುವುದಿಲ್ಲ. ಆದರೆ, ಹೀಗೆ ವಿಕ್ರಂ ಸೂರಿ ನಿರ್ದೇಶಕನಾಗಿದ್ದರ ಹಿಂದೆ ಒಂದಷ್ಟು ತಯಾರಿಗಳಿವೆ. ಅದಕ್ಕೆ ಪ್ರೇರಣೆ ನೀಡಿದ ಒಂದಷ್ಟು ಅಚ್ಚರಿದಾಯಕ ವಿಚಾರಗಳಿದ್ದಾವೆ.
ಕಿರುತೆರೆ ನಟನೆಯಲ್ಲಿ ಬ್ಯುಸಿಯಾಗಿದ್ದ ವಿಕ್ರಂಗೆ ವರ್ಷಾಂತರಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಿದ್ದ ಡ್ರಾಮಾ ಜೂನಿಯರ್ಸ್ ಶೋನಾ ಭಾಗವಾಗುವ ಅವಕಾಶ ಸಿಕ್ಕಿತ್ತು. ಅದು ಪುಟಾಣಿ ಜೀವಗಳ ಹಾಸ್ಯ ಲಹರಿಯಲ್ಲಿ ಕರುನಾಡನ್ನೆಲ್ಲ ಮೀಯಿಸಿದ್ದ ಯಶಸ್ವೀ ಕಾರ್ಯಕ್ರಮ. ಆ ಒಟ್ಟಾರೆ ಗೆಲುವಿನಲ್ಲಿ ಖಂಡಿತವಾಗಿಯೂ ವಿಕ್ರಂ ಸೂರಿ ಅವರ ಪಾಲಿದೆ. ಯಾಕೆಂದರೆ, ಅದರಲ್ಲಿನ ಒಂದಷ್ಟು ಸ್ಕಿಟ್‍ಗಳನ್ನು ಸೃಷ್ಟಿಸಿದ್ದವರು ವಿಕ್ರಂ. ಅಂಥಾ ಅದೆಷ್ಟೋ ಸ್ಕಿಟ್‍ಗಳು ಭಾರೀ ಮೆಚ್ಚುಗೆ ಗಳಿಸಿಕೊಂಡಿದ್ದವು. ಆ ಶೋನ ಜಡ್ಜ್‍ಗಳಾಗಿದ್ದ ಟಿ.ಎನ್ ಸೀತಾರಾಮ್ ಮತ್ತು ಲಕ್ಷ್ಮಿ ಅವರಿಗಳು ಅನೇಕ ಬಾರಿ ಈ ವಿಚಾರದಲ್ಲಿ ವಿಕ್ರಂ ಸೂರಿಯವರನ್ನು ಮೆಚ್ಚಿ ಕೊಂಡಾಡಿದ್ದರು.
ಡ್ರಾಮಾ ಜ್ಯೂನಿಯರ್ಸ್ ಸಂದರ್ಭದಲ್ಲಿ ವಿಕ್ರಂ ಸೂರಿ ಅವರೊಳಗಿದ್ದ ನಿರ್ದೇಶನದ ಕಸುವು ಗಮನಿಸಿದ ಅನೇಕರು ನೀವೇ ಒಂದು ಸಿನಿಮಾ ನಿರ್ದೇಶನ ಮಾಡಂಬಂತೆ ಪ್ರೋತ್ಸಾಹಿಸಲಾರಂಭಿಸಿದ್ದರು. ನಂತರದಲ್ಲಿ ಆ ಶೋನ ಭಾಗವಾಗಿಯೇ ಓರ್ವ ಸಹೃದಯಿ ನಿರ್ಮಾಪಕರೂ ಕೂಡಾ ಸಿಕ್ಕಿಬಿಟ್ಟಿದ್ದರು. ತುಂಬಾನೇ ತಯಾರಿ ಮಾಡಿಕೊಂಡ ವಿಕ್ರಂ ಸೂರಿ ಕಡೆಗೂ ನಿರ್ದೇಶಕನಾಗಿ ಅವತಾರವೆತ್ತಿದ್ದರು. ಮೊದಲ ಪ್ರಯತ್ನದಲ್ಲಿಯೇ ಭರವಸೆ ಮೂಡಿಸಿದ್ದ ಅವರೀಗ ಚೌಕಬಾರ ಮೂಲಕ ಎರಡನೇ ಬಾರಿ ನಿರ್ದೇಶಕನಾಗಿದ್ದಾರೆ. ಇಲ್ಲಿ ಅವರು ನಿರ್ದೇಶನದೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಕಾದಂಬರಿ ಆಧಾರಿತವಾದ, ಭಾವನೆಗಳ ಜೀಕಾಟವಿರುವ ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆಯೆಂಬ ತುಂಬು ನಂಬಿಕೆ ವಿಕ್ರಂ ಸೂರಿಯವರೊಳಗಿದೆ.