ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರ ಈ ವಾರವೇ ಬಿಡುಗಡೆಗೊಳ್ಳಲಿದೆ. ಕೊರೋನಾ ವೈರಸ್ಸಿನ ಘಾತುಕ ವಾತಾವರಣವನ್ನೆಲ್ಲ ದಾಟಿಕೊಂಡು ಬಂದಿದ್ದ ಚೇಸ್, ಅಂಥಾ ವಿಷಮ ಸನ್ನಿವೇಶದಲ್ಲಿಯೂ ಒಂದಲ್ಲೊಂದು ರೀತಿಯಲ್ಲಿ ಸುದ್ದಿ ಮಾಡಿಕೊಂಡೇ ಸಾಗಿ ಬಂದಿತ್ತು. ಇಂಥಾ ಪರಿಸ್ಥಿತಿಯಲ್ಲಿ ಒಂದಷ್ಟು ತಡವಾದಾಗ, ಸಿನಿಮಾ ಪ್ರೇಕ್ಷಕರ ಸ್ಮೃತಿಯಿಂದ ಮರೆಯಾಗದಂತೆ ನೋಡಿಕೊಳ್ಳೋದೇ ಒಂದು ಚಾಲೆಂಜ್. ಅದನ್ನು ವಿಲೋಕ್ ಶೆಟ್ಟಿ ಸಾರಥ್ಯದಲ್ಲಿ ಚಿತ್ರತಂಡ ಸಮರ್ಥವಾಗಿ ಎದುರಿಸಿದೆ. ತಡವಾದಷ್ಟೂ ಚೇಸ್ ಬಗೆಗಿನ ಕುತೂಹಲದ ಮೀಟರ್ ಏರುಗತಿ ಕಾಣುತ್ತಲೇ ಸಾಗುತ್ತಿತ್ತು. ಇದೀಗ ಕಡೇ ಕ್ಷಣದಲ್ಲಿ ಕುತೂಹಲದ ಕಿಚ್ಚು ಹಚ್ಚುವಂಥಾ ಜಬರ್ದಸ್ತ್ ಟ್ರೈಲರ್ ಲಾಂಚ್ ಆಗಿದೆ!
ಒಂದಿಡೀ ಚಿತ್ರದ ಸಾರವನ್ನು ಕಥೆಯ ಆಂತರ್ಯ ಬಿಟ್ಟುಕೊಡದೆ, ಕುತೂಹಲವನ್ನಷ್ಟೇ ತೀವ್ರವಾಗಿಸುವಂತೆ ಕಟ್ಟಿ ಕೊಡೋದು ಸಿನಿಮಾ ತಂಡಗಳ ಪಾಲಿಗೆ ಸವಾಲಿನ ಸಂಗತಿ. ಇದುವರೆಗೂ ಟೀಸರ್ ಮುಂತಾದವುಗಳ ಮೂಲಕ ವಿಲೋಕ್ ಶೆಟ್ಟಿ ಅಂಥಾದ್ದೊಂದು ಜಾಣ್ಮೆ ತೋರಿಸಿದ್ದಾರೆ. ಈಗ ಟ್ರೈಲರ್ ವಿಚಾರದಲ್ಲಿಯೂ ಅದುವೇ ಮುಂದುವರೆದಿದೆ. ಒಂದು ಮರ್ಡರ್, ಅದರ ಸುತ್ತ ಹೆಪ್ಪುಗಟ್ಟಿಕೊಳ್ಳುವ ವಿದ್ಯಮಾನಗಳು, ಆ ಬಿಂದುವಿನಿಂದ ಚಿಮ್ಮುವಂಥಾ ಒಂದಷ್ಟು ಪಾತ್ರಗಳು… ಇದೆಲ್ಲದರೊಂದಿಗೆ ಸೀಟಿನ ಅಂಚಿನಿಂದ ಪ್ರೇಕ್ಷಕರನ್ನು ಆಚೀಚೆ ಕದಲದಂತೆ ಕಟ್ಟಿಡುವ ಕಂಟೆಂಟು ಚೇಸ್ನಲ್ಲಿದೆ ಎಂಬುದು ಈ ಟ್ರೈಲರ್ ಮೂಲಕ ಸಾಬೀತಾಗಿದೆ.
ಒಂದು ಟ್ರೈಲರ್ ಯಾವ್ಯಾವ ವಿಚಾರದಲ್ಲಿ ಗಮನ ಸೆಳೆಯಬೇಕೋ, ಅದೆಲ್ಲವನ್ನೂ ಒಳಗೊಂಡಿರುವ ಚೇಸ್ ಟ್ರೈಲರ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆಚ್ಚೆಚ್ಚು ವೀಕ್ಷಣೆಗಳು ಸಿಗುತ್ತಾ, ಪ್ರೇಕ್ಷಕರೆಲ್ಲ ಚೇಸ್ ಅನ್ನು ಕಣ್ತುಂಬಿಕೊಳ್ಳಲು ಕಾದು ಕೂರುವಂತಾಗಿದೆ. ಹಲವಾರು ಕೋನಗಳಲ್ಲಿ ಕಥೆಯ ಹರವು ಹೊಂದಿರುವ ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿಯೇ ಭಿನ್ನ ಬಗೆಯದ್ದೆಂದು ಈ ಹಿಂದೆಯೂ ವಿಲೋಕ್ ಶೆಟ್ಟಿ ಹೇಳಿಕೊಂಡಿದ್ದರು. ಇದೀಗ ಟ್ರೈಲರ್ ನೋಡಿದ ಸರ್ವರಿಗೂ ಅದು ನಿಜವೆನ್ನಿಸಿದೆ. ತಾಂತ್ರಿಕವಾಗಿಯೂ ಶ್ರೀಮಂತವಾಗಿರುವ ಚೇಸ್, ದೃಷ್ಯ ವೈಭವದಲ್ಲಿಯೂ ವಿಶೇಷ ಸ್ಥಾನ ಪಡೆದುಕೊಳ್ಳುತ್ತದೆ. ಅದೆಲ್ಲವೂ ದಿನದೊಪ್ಪತ್ತಿನಲ್ಲಿಯೇ ನಿಮ್ಮೆಲ್ಲರ ಮುಂದೆ ಅನಾವರಣಗೊಳ್ಳಲಿದೆ.
ಈ ಚಿತ್ರವನ್ನು ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ತಾರಾಗಣ ಚೇಸ್ಗಿದೆ.