ಇದು ಎಲ್ಲದಕ್ಕೂ ಪಾರಂಪರಿಕ ರೀತಿ ರಿವಾಜುಗಳಾಚೆಗೆ ಹೊಸ ಆವಿಷ್ಕಾರಗಳು ಕೆನೆದಾಡುತ್ತಿರೋ ಆಧುನಿಕ ಜಮಾನ. ಇಲ್ಲಿ ಎಲ್ಲವೂ ಫಟಾ ಫಟ್ ಎಂಬಂತಾಗಬೇಕು. ಅಷ್ಟೇ ಸಲೀಸಾಗಿಯೂ ಆಗಬೇಕು. ಈ ಧಾವಂತದಲ್ಲಿ ಯಾವುದಕ್ಕೋ ಜೋತು ಬಿದ್ದಿರೋ ನಾವುಗಳೆಲ್ಲ ನಾವೇ ಬುದ್ಧಿವಂತರೆಂಬಂತೆ ಬೀಗುತ್ತೇವೆ. ಆದರೆ ಅಂಥಾ ಆಧುನಿಕ ಸವಲತ್ತುಗಳಿಂದ ನಮ್ಮದೇ ದೇಹದ ಮೇಲಾಗಬಹುದಾದ ಭಯಾನಕ ಪರಿಣಾಮಗಳತ್ತ ಅಕ್ಷರಶಃ ಕುರುಡಾಗಿದ್ದೇವೆ. ಇದೀಗ ಪಾಶ್ಚಾತ್ಯ ದೇಶಗಳು ಮಾತ್ರವಲ್ಲದೇ ನಮ್ಮಲ್ಲಿಯೂ ವ್ಯಾಪಕವಾಗುತ್ತಿರೋ ಟಾಯ್ಲೆಟ್ ಪೇಪರ್ ಸುತ್ತ ನಡೆದಿರೋ ಅಧ್ಯಯನವೊಂದು ಹೊರಹಾಕಿರೋ ವಿಚಾರ ಈ ಬಗ್ಗೆ ಆಲೋಚನೆಗೆ ಹಚ್ಚುವಂತಿದೆ.
ಟಾಯ್ಲೆಟ್ ಪೇಪರ್ ಬಳಸಿದರೆ ಎಲ್ಲವೂ ಸಲೀಸಾಗುತ್ತೆ ಅನ್ನೋ ನಂಬಿಕೆಯಿದೆ. ಸ್ವಚ್ಛತೆಯ ವಿಚಾರದಲ್ಲಿಯೂ ಅದನ್ನೊಂದು ಸರಿಯಾದ ಆಯ್ಕೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಅದು ಸುಳ್ಳೆಂಬುದನ್ನ ಸದರಿ ಅಧ್ಯಯನ, ಸಂಶೋಧನೆ ಸಾಬೀತು ಪಡಿಸುತ್ತಿದೆ. ಯಾಕಂದ್ರೆ ಟಾಯ್ಲೆಟ್ ಪೇಪರ್ ಯಾವುದೇ ಸೋಂಕುಗಳನ್ನು ತಡೆಯುವ ತಾಕತ್ತನ್ನೂ ಹೊಂದಿಲ್ಲ. ಬಹುಕಾಲ ಟಾಯ್ಲೆಟ್ ಪೇಪರುಗಳನ್ನೇ ಬಳಸಿದರೆ ಮೂತ್ರ ಸಂಬಂಧಿ ಸೋಂಕು ತಗುಲೋ ಸಾಧ್ಯತೆ ಹೆಚ್ಚಾಗಿದೆ. ಅದು ಟಾಯ್ಲೆಟ್ ಪೇಪರಿನಿಂದ ಹರಡುತ್ತೆ ಅನ್ನೋದಕ್ಕಿಂತಲೂ ಅದು ಸೋಂಕನ್ನು ತಡೆಯಲು ಶಕ್ತವಾಗಿಲ್ಲ ಅನ್ನೋದೇ ಸೂಕ್ತ.
ಟಾಯ್ಲೆಟ್ ಪೇಪರಿನಿಂದ ಹೀನಾಮಾನ ಉಜ್ಜಿಕೊಳ್ಳೋದರಿಂದ ಶಾಶ್ವತವಾದ ಸಮಸ್ಯೆಗಳನ್ನೂ ಮೈಮೇಲೆಲೆ ಎಳೆದುಕೊಂಡಂತಾದರೂ ಅಚ್ಚರಿಯೇನಿಲ್ಲ. ಅದು ಸದ್ದೇ ಇಲ್ಲದಂತೆ ನಮ್ಮ ದೇಹವನ್ನು ಆಕ್ರಮಿಸಿಕೊಂಡು ನಂತರ ನರಳುವಂತೆ ಮಾಡಿ ಬಿಡಬಹುದು. ಯಾಕಂದ್ರೆ ಟಾಯ್ಲೆಟ್ ಪೇಪರ್ ಅನ್ನು ಯದ್ವಾ ತದ್ವ ಬಳಸೋದರಿಂದ ಗುದ ಭಾಗದಲ್ಲಿ ಬಿರುಕುಗಳು ಮೂಡಬಹುದು. ಅದುವೇ ಮೂಲವ್ಯಾಧಿಯಾಗಿಯೂ ಉಲ್ಬಣವಾಗಬಹುದು. ಅಂತೂ ಸದರಿ ಸಂಶೋಧನೆ ಯಾವ ಕಾರಣದಿಂದಲೂ ಟಾಯ್ಲೆಟ್ ಪೇಪರ್ ಸೂಕ್ತವಲ್ಲ ಅನ್ನೋದನ್ನ ಸಾಬೀತುಪಡಿಸುತ್ತೆ. ಲಕ್ಷಣವಾಗಿ ನಮ್ಮ ಪೂರ್ವಜರಂತೆ ತೊಳೆದುಕೊಳ್ಳೋ ಹಾದಿ ಹಿಡಿಯೋದೇ ಉತ್ತಮ!