ನಾವು ನಮ್ಮ ಸುತ್ತ ಮುತ್ತ ಇರೋ ಕೆಲ ಆಚಾರ, ವಿಚಾರ, ನಂಬಿಕೆಗಳನ್ನೇ ವಿಚಿತ್ರ ಅಂದುಕೊಳ್ಳುತ್ತೇವೆ. ಕೆಲವೊಮ್ಮೆ ಅಂಥಾ ಸಂಪ್ರದಾಯಗಳ ಅಸಲೀ ಅರ್ಥವಂತಿಕೆಯ ಬಗ್ಗೆ ತಿಳಿದಾಗ ಪೂರ್ವಜರು ಅದೆಷ್ಟು ಅರ್ಥವತ್ತಾಗಿ ಆಲೋಚಿಸುತ್ತಿದ್ದರಲ್ಲಾ ಅಂತ ಅಚ್ಚರಿಗೊಳ್ಳುತ್ತೇವೆ. ಅದರಲ್ಲಿಯೂ ಬದುಕಿನ ಪ್ರಮುಖ ಘಟ್ಟವಾದ ಮದುವೆಯ ವಿಚಾರದಲ್ಲಿ ನಮ್ಮಲ್ಲಿ ಸಾಕಷ್ಟು ಸಂಪ್ರದಾಯಗಳಿವೆ. ಆದರೆ ಪೂರ್ವ ಜರ್ಮನಿಯಲ್ಲಿರುವಂಥ ಸಂಪ್ರದಾಯ ಮಾತ್ರ ಇಡೀ ಭಾರತದಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ. ಬಹುಶಃ ಬೇರ್ಯಾವ ದೇಶಗಳಲ್ಲಿಯೂ ಅದು ಕಾಣ ಸಿಗೋದು ಸಂದೇಹವೇ!
ಹಾಗಾದ್ರೆ ಮದುವೆ ವಿಚಾರದಲ್ಲಿ ಜರ್ಮನಿಯಲ್ಲಿ ಚಾಲ್ತಿಯಲ್ಲಿರೋ ಸಂಪ್ರದಾಯ ಯಾವುದು ಎಂಬ ಕುತೂಹಲ ಸಹಜವಾಗಿಯೇ ಒತ್ತರಿಸುತ್ತೆ. ನಮ್ಮಲ್ಲಿ ಮದುವೆಯಾದ ನಂತರದಲ್ಲಿ ಮದುಮಕ್ಕಳನ್ನು ಹೂವಿನಂತೆ ನೋಡಿಕೊಂಡು ಪ್ರಸ್ಥದ ಕೊಠಡಿ ತಲುಪಿಸಲಾಗುತ್ತೆ. ಆದರೆ ಪೂರ್ವ ಜರ್ಮನಿಯಲ್ಲಿ ಮದುವೆಯಾಗೋ ನವ ಜೋಡಿಗಳ ಹಾದಿ ಅಷ್ಟು ಸುಗಮವಾಗಿಲ್ಲ. ಯಾಕಂದ್ರೆ ಗಂಡ ಹೆಂಡಿರಿಬ್ಬರೂ ಸೇರಿಕೊಂಡು ಇಡೀ ಮನೆಯನ್ನ ಸ್ವಚ್ಛಗೊಳಿಸಿ ಹಿರೀಕರನ್ನೆಲ್ಲ ಸಂತೃಪ್ತಗೊಳಿಸಿದ ನಂತರವಷ್ಟೇ ಅವರ ಪಾಲಿಗೆ ಫಸ್ಟ್ ನೈಟ್ ಭಾಗ್ಯ ಲಭಿಸುತ್ತದೆಯಂತೆ.
ನಮ್ಮಲ್ಲಿ ಮದುವೆಯ ನಂತರದಲ್ಲಿ ಬೀಗರೂಟದ ಸಂಪ್ರದಾಯ ಇದೆಯಲ್ಲಾ? ಹಾಗೆಯೇ ಪೂರ್ವ ಜರ್ಮನಿಯಲ್ಲಿ ಮದುವೆಯಾದ ಘಂಟೆಗಳೊಪ್ಪತ್ತಿನಲ್ಲಿಯೇ ಒಂದು ಸಂಪ್ರದಾಯವಿದೆ. ಅಲ್ಲಿ ನೆರೆದ ಕುಟುಂಬಸ್ಥರೆಲ್ಲರೂ ಊಟ ಮಾಡಿದ ತಟ್ಟೆ ಲೋಟಗಳನ್ನೆಲ್ಲ ಮನೆ ತುಂಬಾ ಚೆಲ್ಲಾಪಿಲ್ಲಿಯಾಗುವಂತೆ ಎಸೆಯುತ್ತಾರೆ. ಪಿಂಗಾಣಿ ವಸ್ತುಗಳನ್ನ ಪುಡಿಗಟ್ಟುತ್ತಾರೆ. ಅದೆಲ್ಲವನ್ನೂ ಸ್ವಚ್ಛಗೊಳಿಸಿ, ಎಲ್ಲರೂ ಉಂಡೆಸೆದ ತಟ್ಟೆ ಲೋಟಗಳನ್ನ ಗಂಡ ಹೆಂಡಿರು ಒಟ್ಟಾಗಿ ತೊಳೆಯಬೇಕಾಗುತ್ತೆ. ಅದಾದ ನಂತರವಷ್ಟೇ ಪ್ರಸ್ಥದ ವ್ಯವಸ್ಥೆಯಾಗುತ್ತದಂತೆ. ಅಂದಹಾಗೆ ಈ ಸಂಪ್ರದಾಯದ ಹಿಂದೆ ಕಷ್ಟಕರವಾದ ಸನ್ನಿವೇಶಗಳಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಹೊಂದಿಕೊಂಡು ಹೋಗೋದನ್ನು ಕಲಿಸುವ ಸದುದ್ದೇಶವಿದೆಯಂತೆ!