ಪ್ರದ್ಮನಾಭ ನಗರದ ದಿಕ್ಕಿನಲ್ಲಿ ರಾಜಕೀಯ ಸಂಚಲನ!
ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹಿತವಾಗಿದೆ. ಇದೀಗ ಯಾವ ಕ್ಷೇತ್ರದಿಂದ ಯಾರು ಕಣಕ್ಕಿಳಿಯುತ್ತಾರೆ, ಯಾವ ಪಕ್ಷದಿಂದ ಯಾರಿಗೆ ಟಿಕೇಟು ಸಿಕ್ಕುತ್ತದೆ ಎಂಬುದರ ಸುತ್ತ ಚರ್ಚೆಗಳು ಆರಂಭವಾಗಿವೆ. ಹಾಗಂತ ಕರ್ನಾಟಕದ ಅಷ್ಟೂ ವಿಧಾನಸಭಾ ಕ್ಷೇತ್ರಗಳ ಮೇಲೆಯೂ ಇಂಥಾದ್ದೇ ಕುತೂಹಲವಿದೆ ಅಂದುಕೊಳ್ಳಬೇಕಿಲ್ಲ. ನಾನಾ ಕಾರಣಗಳಿಂದಾಗಿ ಕೆಲವೊಂದಷ್ಟು ಕ್ಷೇತ್ರಗಳು ಮುಖ್ಯವಾಗಿ ಬಿಂಬಿಸಿಕೊಂಡಿವೆ. ಅಂಥಾ ಕ್ಷೇತ್ರಗಳಲ್ಲಿ ಬೆಂಗಳೂರಿನ ಪದ್ಮನಾಭ ನಗರವೂ ಒಂದಾಗಿ ದಾಖಲಾಗುತ್ತದೆ. ಇಲ್ಲಿ ಈಗೊಂದಷ್ಟು ವರ್ಷಗಳಿಂದೀಚೆಗೆ ಪದ್ಮನಾಭ ನಗರಕ್ಕೆ ಭಾರತೀಯ ಜನತಾ ಪಾರ್ಟಿಯ ಆರ್. ಅಶೋಕ್ ಅನಭಿಷಿಕ್ತ ದೊರೆಯಂತೆ, ಅಕ್ಷರಶಃ ಸಾಮ್ರಾಟನಂತೆ ಮೆರೆಯುತ್ತಿದ್ದಾರೆ. ಅಭಿವೃದ್ಧಿಯ ಮಾನದಂಡಗಳಾಚೆಗೂ ಅಶೋಕ್ ಈ ಕ್ಷೇತ್ರದಲ್ಲಿ ಸಲೀಸಾಗಿ ಸಡಿಲಾಗದಂತೆ ತಮ್ಮ ರಾಜಕೀಯ ಬೇರುಗಳನ್ನು ಇಳಿಬಿಟ್ಟಿದ್ದಾರೆ. ಆದರೆ, ಈ ಬಾರಿ ಮಾತ್ರ ಅಶೋಕ್ಗೆ ಸಾಲು ಸಾಲು ಸವಾಲುಗಳಿದ್ದಾವೆ. ನಟಿ ರಮ್ಯಾರನ್ನು ಕಾಂಗ್ರೆಸ್ ಒಂದುವೇಳೆ ಪದ್ಮನಾಭ ನಗರದಿಂದ ಕಣಕ್ಕಿಳಿಸಿದರೆ ಅಶೋಕನ ಸಾಮ್ರಾಜ್ಯದ ಎದೆಯಲ್ಲಿ ನಡುಕ ಹುಟ್ಟೋದಂತೂ ಖರೇ!
ಹಾಗೆ ನೋಡಿದರೆ, ಅಶೋಕ್ ನಾಗಾಲೋಟಕ್ಕೆ ಬ್ರೇಕ್ ಹಾಕಲು ದೇವೇಗೌಡರ ಪಾಳೆಯದಿಂದಲೇ ನಾನಾ ಪಟ್ಟುಗಳು ಪ್ರಯೋಗಿಸಲ್ಪಟ್ಟಿದ್ದವು. 2008ರಲ್ಲಿ ಅದೆಲ್ಲದಕ್ಕೂ ಸೆಡ್ಡು ಹೊಡೆದು ಗೆದ್ದಿದ್ದವರು ಆರ್. ಅಶೋಕ್. ಆ ನಂತರದ ಚುನಾವಣೆಗಳಲ್ಲಿ ವಿರೋಧಿ ಪಾಳೆಯ ಅದೆಂಥಾ ಕಸರತ್ತುಗಳನ್ನ ನಡೆಸಿದ್ದರೂ ಅಶೋಕ್ ಓಟಕ್ಕೆ ತಡೆಯೊಡ್ಡಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಹೇಗಾದರೂ ಮಾಡಿ ಆರ್. ಅಶೋಕ್ರನ್ನು ಮಣಿಸಿಯೇ ತೀರಬೇಕೆಂದು ಕಾಂಗ್ರೆಸ್ ಹೊರಟಂತಿದೆ. ಹಾಗಾದರೆ, ಈ ಬಾರಿ ಕಾಂಗ್ರೆಸ್ ಯಾವ ಅಭ್ಯರ್ಥಿಯನ್ನು ಅಶೋಕ್ ವಿರುದ್ಧ ಕಣಕ್ಕಿಳಿಸಲಿದೆ ಎಂಬ ಪ್ರಶ್ನೆ ಸಹಜ. ಅದಕ್ಕುತ್ತರವಾಗಿ ನಿಲ್ಲುತ್ತಿರೋದು ಸ್ಯಾಂಡಲ್ವುಡ್ನ ಪದ್ಮಾವತಿ, ಕಾಂಗ್ರೆಸ್ ಪಕ್ಷದ ಯುವ ನಾಯಕಿ ರಮ್ಯಾ ಹೆಸರು!
ಕಾಂಗ್ರೆಸ್ ಅಂತಃಪುರದಲ್ಲಿ ಕಳೆದೊಂದು ತಿಂಗಳಿಂದೀಚೆಗೆ ಇಂಥಾದ್ದೊಂದು ಚರ್ಚೆ ನಡೆಯುತ್ತಿದೆ. ಒಂದು ಮೂಲದ ಪ್ರಕಾರ ಅದಕ್ಕೆ ಈಗಾಗಲೇ ಅಧಿಕೃತ ಸ್ವರೂಪ ಬಂದಿದೆ. ಈ ಹಿಂದೆ ಅಚಾನಕ್ಕಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದವರು ರಮ್ಯಾ. ಆ ನಂತರದ ಚುನಾವಣೆಯಲ್ಲಿ ಸೋತರೂ ಕೂಡಾ, ಹೈ ಕಮಾಂಡ್ ಮಟ್ಟದಲ್ಲಿ ಪ್ರಭಾವ ಉಳಿಸಿಕೊಂಡು, ಐಟಿ ಸೆಲ್ಲಿನ ಸಾರಥ್ಯವನ್ನೂ ವಹಿಸಿಕೊಂಡಿದ್ದರು. ಆ ಕಾಲದಲ್ಲಿ ರಮಾರ ಪ್ರಧಾನ ಆಸಕ್ತಿ ಇದ್ದದ್ದು ರಾಷ್ಟ್ರ ರಾಜಕಾರಣದತ್ತಲೇ. ಅದೇನೇ ಪಲ್ಲಟಗಳು ಸಂಭವಿಸಿದರೂ ಕೂಡಾ ರಮ್ಯಾ ರಾಜ್ಯ ರಾಜಕಾರಣದತ್ತ ಚಿತ್ತ ಹರಿಸಿದ್ದು ಕಡಿಮೆ. ಆದರೆ ಈ ಬಾರಿ ಆಕೆಯ ಮನಃಸ್ಥಿತಿ ಬದಲಾದಂತಿದೆ.
ಈ ಬಾರಿ ಬಿಜೆಪಿ ಆಡಳಿತ ವಿರೋಧಿ ಅಲೆಯಲ್ಲಿ ಕಾಂಗ್ರೆಸ್ಗೆ ಒಂದಷ್ಟು ಆಶಾದಾಯಕ ವಾತಾವರಣವಿದೆ. ಅತ್ತ ಸಿದ್ದರಾಮಯ್ಯ ಗರಿ ಗರಿ ಶಲ್ಯ ಪಂಚೆ ರೆಡಿ ಮಾಡಿಟ್ಟುಕೊಂಡು ಸಿಎಂ ಆಗಲು ರೆಡಿಯಾಗಿದ್ದರೆ, ಇತ್ತ ಡಿ.ಕೆ ಶಿವಕುಮಾರ್ ಸೂಟ್ ಕೂಡಾ ತಯಾರಾಗಿದೆ. ಕಾಂಗ್ರೆಸ್ನ ಆಂತರಿಕ ನೀತಿ, ನಿಜಾಯಿತಿಗಳ ಅನುಸಾರವಾಗಿ ಇಬ್ಬರ ಭವಿಷ್ಯವೂ ನಿರ್ಧಾರಗೊಳ್ಳಲಿದೆ. ಹೇಳಿಕೇಳಿ ರಮ್ಯಾಗೆ ಡಿ.ಕೆ ಶಿವಕುಮಾರ್ ರಾಜಕೀಯ ಗುರು. ಒಂದು ಮೂಲದ ಪ್ರಕಾರ ಡಿಕೆಶಿ ಕಡೆಯಿಂದ ರಮ್ಯಾಗೆ ರಾಜ್ಯ ರಾಜಕಾರಣಕ್ಕೆ ಬರಲುಇಷಾರೆ ದೊರೆತಿದೆ. ಕೇಂದ್ರ ಮಟ್ಟದ ರಾಜಕಾರಣದಲ್ಲಿ ಒಂದಷ್ಟು ವರ್ಷಗಳ ಕಾಲ ಇದ್ದು ಬಸವಳಿದಿರುವ ರಮ್ಯಾಗೂ ರಾಜ್ಯ ರಾಜಕಾರಣದತ್ತ ಒಲವು ಮೂಡಿಕೊಂಡಿರುವಂತಿದೆ. ಹಾಗೊಂದು ವೇಳೆ ರಮ್ಯಾ ಏನಾದರೂ ಗಟ್ಟಿ ನಿರ್ಧಾರ ತಳೆದರೆ, ಪದ್ಮನಾಭ ನಗರ ಕ್ಷೇತ್ರ ಆಕೆಗೆ ಫಿಕ್ಸಾಗಲಿದೆ.
ಹಾಗೊಂದು ವೇಳೆ ಪದ್ಮಾವತಿ ಎಂಟ್ರಿ ಕೊಟ್ಟರೆ, ಈ ಬಾರಿ ಅಶೋಕ್ ಸಾಮ್ರಾಜ್ಯ ಧೂಳೀಪಟವಾದರೂ ಅಚ್ಚರಿಯೇನಿಲ್ಲ. ಅದಕ್ಕೆ ಸರಿಯಾಗಿ ಒಳಗೊಳಗೇ ಪದ್ಮನಾಭನಗರ ಸೀಮೆಯ ಬಿಜೆಪಿ ಪಾಳೆಯದಲ್ಲಿ ಅಶೋಕ್ ವಿರುದ್ಧದ ಅಸಹನೆ ಹರಳುಗಟ್ಟಿಕೊಳ್ಳುತ್ತಿದೆ. 2008ರಿಂದ ಸಾಲು ಸಾಲಾಗಿ ಗೆಲುವು ಕಂಡ ಅಶೋಕ್ಗೀಗ ಸೋಲು ಕಾಣುವ ಭಯವೂ ಶುರುವಾದಂತಿದೆ. 2008ರ ಚುನಾವಣೆಯಲ್ಲಿ ದೇವೇಗೌಡರ ನೀಲಿಕಣ್ಣಿನ ಹುಡುಗನಂತಿದ್ದ ಕಬಡ್ಡಿ ಬಾಬುವನ್ನು ಜೆಡಿಎಸ್ನಿಂದ ಕಣಕ್ಕಿಳಿಸಲಾಗಿತ್ತು. ಹೇಳಿಕೇಳಿ ಪದ್ಮನಾಭ ನಗರ ಒಂದಷ್ಟು ಹೈ ಕ್ವಾಲಿಫೈಡ್ ಏರಿಯಾ. ಇಂಥಲ್ಲಿಗೆ ದಂಡು ದಾಂಗುಡಿ ಅಂತೆಲ್ಲ ಹಾರಾಡುತ್ತಿದ್ದ ರೌಡಿ ಎಲಿಮೆಂಟು ಕಬಡ್ಡಿ ಬಾಬು ಕಣಕ್ಕಿಳಿದರೆ ಹೇಗಾಗಬೇಡ? ಆತನ ವಿರುದ್ಧ ಸಾತ್ವಿಕ ಲುಕ್ಕಿನಲಿ ಕ್ಷೇತ್ರದ ತುಂಬಾ ಓಡಾಡಿದ್ದ ಅಶೋಕ್ ಗೆದ್ದಿದ್ದರು. ಜನಸಾಮಾನ್ಯರ ಕೈಗೂ ಸಿಗುತ್ತಾ ಜನಾನುರಾಗಿ ಅನ್ನಿಸಿಕೊಂಡಿದ್ದರು. ಇದಾದ ಬಳಿಕ ಈ ಕ್ಷೇತ್ರದ ಉತ್ತರಹಳ್ಳಿ ಮುಂತಾದ ಭಾಗಗಳ ಕೆರೆ ಕಟ್ಟೆಗಳನ್ನು ಹಿಂಬಾಲಕರು ಬಡಿದು ಬಾಯಿಗೆ ಹಾಕಿಕೊಂಡರೂ ದಕ್ಕಿಸಿಕೊಂಡಿದ್ದರು. ಉತ್ತರಹಳ್ಳಿಗೆ ಹೊಂದಿಕೊಂಡಿರುವ ತುರಹಳ್ಳಿ ಅರಣ್ಯವನ್ನು ಮೆತ್ತಗೆ ನುಂಗಿಯೂ ನಾಜೂಕಿನಿಂದ ಪಾರಾಗಿದ್ದರು!
ಇಂಥಾ ಅಶೋಕ್ಗೆ ಆ ಬಳಿಕ ಸೋಲಿನ ರುಚಿ ಕಾಣಿಸುವ ಕಾಂಗ್ರೆಸ್ಸಿನ ಕಸರತ್ತುಗಳೂ ಗೋತಾ ಹೊಡೆದಿದ್ದವು. ಪದ್ಮನಾಭ ನಗರ ದೇವೇಗೌಡರ ಕರ್ಮಭೂಮಿ ಇದ್ದಂತೆ. ಅವರು ವಾಸವಿರುವುದೂ ಅಲ್ಲಿಯೇ. ಆದರೂ ಕೂಡಾ ಸಮರ್ಥವಾದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಶೋಕ್ರನ್ನು ಸೋಲಿಸುವಲ್ಲಿ ದೇವೇಗೌಡರು ವಿಫಲರಾಗಿದ್ದರು. ಅದು ಅಶೋಕ್ ಮತ್ತು ಗೌಡರ ಪಟಾಲಮ್ಮಿನ ನಡುವೆ ನಡೆದಿರುವ ಒಳ ಒಪ್ಪಂದಗಳ ಪ್ರಭಾವ ಅನ್ನುವವರೂ ಇದ್ದಾರೆ. ಆದರೆ, ಈ ಬಾರಿ ಮಾತ್ರ ಅಶೋಕ್ ಹಣೆಬರಹ ಸಂಪೂರ್ಣವಾಗಿ ಬದಲಾಗುವ ಸಾಧ್ಯತೆಗಳೇ ಢಾಳಾಗಿ ಗೋಚರಿಸುತ್ತಿದೆ. ಯಾಕೆಂದರೆ, ಕಾಂಗ್ರೆಸ್ ಮಂದಿ ರಮ್ಯಾಳನ್ನು ಕಣಕ್ಕಿಳಿಸಿ ಅಶೋಕನಿಗೆ ಸೋಲುಗಾಣಿಸುವ ಉಮೇದಿನಲ್ಲಿದ್ದಾರೆ. ಒಂದು ಮೂಲದ ಪ್ರಕಾರ, ಕುಮಾರಸ್ವಾಮಿಗಳೂ ಕೂಡಾ ಈ ವಿಚಾರದಲ್ಲಿ ಕಾಂಗ್ರೆಸ್ನೊಂದಿಗೆ ಕೈ ಜೋಡಿಇದ್ದಾರೆ. ಇದೆಲ್ಲವೂ ಅಶೋಕನ ಸಾಮ್ರಾಜ್ಯದ ಇಟ್ಟಿಗೆಗಳು ಸಡಿಲಗೊಳ್ಳುತ್ತಿರುವ ಸೂಚನೆ ನೀಡುತ್ತಿವೆ!

ಅಶೋಕ್ ಉಪಮುಖ್ಯಮಂತ್ರಿಯಾಗಿ, ರಾಜ್ಯ ಬಿಜೆಪಿಯಲ್ಲಿ ಪ್ರಭಾವಶಾಲಿ ಅನ್ನಿಸಿಕೊಂಡಿರುವವರು. ಹಾಗಿರುವಾಗ, ಅಂಥಾ ನಾಯಕನನ್ನು ಉಳಿಸಿಕೊಳ್ಳಲು ಬಿಜೆಪಿ ಪಾಳೆಯದಲ್ಲಿಯೂ ರಣತಂತ್ರಗಳು ಚಾಲ್ತಿಯಲ್ಲಿರಬೇಕಲ್ಲಾ? ಅಂಥಾದ್ದೇನಾದರೂ ನಡೆಯುತ್ತಿದೆಯಾ ಅಂತ ನೋಡ ಹೋದರೆ, ಅಲ್ಲಿ ಮತ್ತೊಂದು ಬಗೆಯ ಪಲ್ಲಟಗಳು ಸಂಭವಿಸುತ್ತಿವೆ. ಅಶೋಕನನ್ನು ಸೋಲಿಸುವ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಕಾರ್ಯಾಚರಣೆ ಯಡ್ಡಿ ಪಾಳೆಯಕ್ಕೂ ಖುಷಿ ತಂದಂತಿದೆ. ಅದಕ್ಕೆ ಕಾರಣವೂ ಇದೆ. ಯಡ್ಡಿ ಜೈಲುಪಾಲಾದ ಘಳಿಗೆಯಲ್ಲಿ ತೀವ್ರ ಅವಮಾನ ಅನುಭವಿಸಿದ್ದರಲ್ಲಾ? ಆಗ ಬಿಜೆಪಿಯ ಯಡ್ಡಿ ವಿರೋಧಿ ಬಣದಲ್ಲಿ ಸಕ್ರಿಯರಾಗಿದ್ದವರು ಇದೇ ಅಶೋಕ್. ಈ ಸಂಬಂಧವಾಗಿ ಯಡ್ಡಿ ಪಾಳೆಯಕ್ಕೆ ಅಶೋಕ್ ಮೇಲೊಂದು ಅಸಹನೆ ಇದ್ದೇ ಇದೆ. ಅದೆಲ್ಲವೂ ಒಟ್ಟುಗೂಡಿ, ಈ ಬಾರಿ ಸಾಮ್ರಾಟ್ ಅಶೋಕ್ ಖಾಯಮ್ಮಾಗಿ ಅಂತಃಪುರ ಸೇರಿಕೊಳ್ಳುವಂತಾದರೂ ಅಚ್ಚರಿಯೇನಿಲ್ಲ!