ರಾಜಕಾರಣಿಗಳೇ ಪ್ರಭುಗಳಾಗಿ ಮೆರೆಯುತ್ತಿರೋ ದುಷ್ಟ ವ್ಯವಸ್ಥೆಯಿದು. ಇಂಥಾ ರಾಜಕಾರಣಿಗಳು ಅಧಿಕಾರ ಕೇಂದ್ರಕ್ಕೆ ಬರುತ್ತಲೇ ತಮ್ಮ ತಲುಬಿಗಾಗಿ ಕಾನೂನು ಸುವ್ಯವಸ್ಥೆಗೇ ಕುಣಿಕೆ ಬಿಗಿಯಲೂ ಹೇಸೋದಿಲ್ಲ. ಈ ಮೂಲಕ ಸಂವಿಧಾನದ ಆಶಯಗಳನ್ನು ಕ್ರಿಮಿಗಳ ರಕ್ಷಣೆಗಾಗಿ ಅಡವಿಡಲೂ ಅಂಜದ ಅವಿವೇಕಿಗಳೇ ಇಂದು ಜನಪ್ರತಿನಿಧಿಗಳ ಸೋಗು ಹಾಕಿದ್ದಾರೆ. ಇಂಥಾ ಖಬರುಗೇಡಿ ರಾಜಕಾರಣಿಗಳ ಆಟಗಳು ಯಾವ ರೀತಿ ಇರುತ್ತವೆಂಬುದಕ್ಕೆ ಪರಪ್ಪನ ಅಗ್ರಹಾರ ಜೈಲಿಗಿಂತಲೂ ತಾಜಾ ಉದಾಹರಣೆ ಬೇರೊಂದಿಲ್ಲ. ಈ ಜೈಲನ್ನು ಕೂಳುಬಾಕ ಅಧಿಕಾರಿಗಳು ಲಾಡ್ಜಿನಂತೆ ಪರಿವರ್ತಿಸಿ ದಶಕಗಳೇ ಕಳೆದಿವೆ. ಯಾವ ಸರ್ಕಾರಗಳು ಬಂದರೂ ಪರಪ್ಪನ ಅಗ್ರಹಾರದೊಳಗಿನ ದಂಧೆಗಳು ಅನೂಚಾನವಾಗಿ ಮುಂದುವರೆದು ಬಂದಿದೆ. ಆದರೀಗ ರಕ್ಕಸ ಭಯೋತ್ಪಾದಕರು, ವಂಚಕರು ಮತ್ತು ಹೆಣ್ಣುಮಕ್ಕಳನ್ನು ಅತ್ಯಾಚಾರವೆಸಗಿ ಕೊಂದ ವಿಕೃತ ಕಾಮಿ ಉಮೇಶ್ ರೆಡ್ಡಿಯಂಥವರಿಗೂ ರಾಜಾತಿಥ್ಯ ನೀಡುವ ಕೀಳುಮಟ್ಟಕ್ಕೆ ಪರಪ್ಪನ ಅಗ್ರಹಾರದ ವ್ಯವಸ್ಥೆ ಇಳಿದುಬಿಟ್ಟಿದೆ!
ಬೆಂಗಳೂರಿನಲ್ಲಿ ಭೂಗತ ಜಗತ್ತಿನ ಚಟುವಟಿಕೆಗಳು ಉತ್ತುಂಗದಲ್ಲಿದ್ದಾಗಲೇ ಪರಪ್ಪನ ಅಗ್ರಹಾರದೊಳಗೆ ಭ್ರಷ್ಟ ಅಧಿಕಾರಿಗಳು ದಂಧೆಯ ದುಖಾನು ತೆರೆದಿದ್ದರು. ಸಾವಿರವಲ್ಲ; ಲಕ್ಷಗಳ ಲೆಕ್ಕದಲ್ಲಿ ಜೈಲಿನ ಬ್ಯಾರಕ್ಕುಗಳನ್ನು ಬಾಡಿಗೆಗೆ ಬಿಡುವ ಮೂಲಕ ಲಕ್ಷಣವಾಗಿ ಕಾಸೆಣಿಸಲು ಶುರುವಿಟ್ಟಿದ್ದರು. ಅಂಥಾ ಹಡಬೆ ಹಣದಲ್ಲಿ ರಾಜಕೀಯ ಪುಢಾರಿಗಳಿಗೂ ಪಾಲಿದ್ದುದರಿಂದ ಒಂದಿಡೀ ಆಡಳಿತ ವ್ಯವಸ್ಥೆ ಹಡಾಲೆದ್ದು ಹೋಗಿತ್ತು. ಹೀಗೆ ಭೂಗತ ಜೀವಿಗಳ ಸೇವೆಯ ಮೂಲಕ ಆರಂಭವಾಗಿದ್ದ ಈ ಜೈಲೊಳಗಿನ ಭ್ರಷ್ಟಾವತಾರವೀಗ ದೇಶದ್ರೋಹಿ ಭಯೋತ್ಪಾದಕರ ಕೈಗೆ ಮೊಬೈಲು ಕೊಟ್ಟು, ಉಮೇಶ್ ರೆಡ್ಡಿಯಂಥಾ ವಿಕೃತ ಕಾಮಿಯನ್ನೂ ಸ್ವಚ್ಛಂದವಾಗಿ ಅಡ್ಡಾಡಲು ಬಿಟ್ಟು, ರನ್ಯಾ ರಾವ್ ಥರದ ಹೈಫೈ ವಂಚಕಿಯ ಇಷಾರೆಯಂತೆ ಗೃಹ ಇಲಾಖೆಯೇ ಕುಣಿಯುತ್ತಿದೆ ಎಂಬ ಆರೋಪ ಹರಿದಾಡುವ ಮಟ್ಟಕ್ಕೆ ಹಬ್ಬಿಕೊಂಡಿದೆ!
ವೀಡಿಯೋ ಜಾಡು ಹಿಡಿದು…
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧಿಯಾಗಿದ್ದ ದರ್ಶನ್ ಪ್ರಕರಣದ ಮೂಲಕ ಪರಪ್ಪನ ಅಗ್ರಹಾರದೊಳಗಿನ ದಂಧೆಗಳ ಲೋಕ ಮತ್ತೊಮ್ಮೆ ಜನರ ಮುಂದೆ ಜಾಹೀರಾಗಿತ್ತು. ವಿಲ್ಸನ್ ಗಾರ್ಡನ್ ನಾಗನಂಥಾ ರೌಡಿಯೊಂದಿಗೆ ಸಿಗರೇಟು ಸೇದುತ್ತಿದ್ದ ದರ್ಶನ್ ಫೋಟೋ ಲೀಕಾದದ್ದೇ ದೊಡ್ಡ ಸುದ್ದಿಯೆನ್ನಿಸಿಕೊಂಡಿತ್ತು. ಅದಾದ ನಂತರ ದಾಸ ಬೇರೊಂದು ಜೈಲಿಗೆ ಕಮಾನೆತ್ತಿಸಿಕೊಂಡಿದ್ದೂ ನಡೆದಿತ್ತು. ಆ ಹಂತದಲ್ಲಿ ಗೊತ್ತಿಲ್ಲ ಖ್ಯಾತಿಯ ಗೃಹ ಸಚಿವರಾದ ಪರಮೇಶ್ವರ್ ಪರಪ್ಪನ ಅಗ್ರಹಾರಕ್ಕೆ ದಾಂಗುಡಿಯಿಟ್ಟು ಎಲ್ಲವನ್ನೂ ಸಪಾಟಾಗಿ ಸರಿಪಡಿಸಿರುವಂತೆ ಪೋಸು ಕೊಟ್ಟಿದ್ದರು. ಅದರ ಬೆನ್ನಲ್ಲಿಯೇ ಮತ್ತೋರ್ವ ರೌಡಿ ಗುಬ್ಬಚ್ಚಿ ಸೀನ ಪರಪ್ಪನ ಅಗ್ರಹಾರದೊಳಗೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ವಿಚಾರವೊಂದು ಸಾಕ್ಷಿ ಸಮೇತ ಜಾಹೀರಾಗಿತ್ತು. ಆ ಹಂತದಲ್ಲಿಯೂ ಗೃಹಸಚಿವರೆನ್ನಿಸಿಕೊಂಡ ಆಸಾಮಿ ಗಂಭೀರ ನಡೆ ಅನುಸರಿಸಲೇ ಇಲ್ಲ!
ಈ ಬಾರಿ ಎರಡನೇ ಅಲೆಯಲ್ಲಿ ದರ್ಶನ್ ಜೈಲುಪಾಲಾದ ನಂತರ ಜೈಲಾಧಿಕಾರಿಯಾಗಿದ್ದ ಸುರೇಶ ಆರಂಭದಲ್ಲಿಯೇ ಆಟ ಕಟ್ಟಿದ್ದ. ಅದರ ಫಲವಾಗಿಯೇ ದರ್ಶನ್ ಎಂಟ್ರಿ ಹಾಕುತ್ತಿದ್ದ ಸಂದರ್ಭದಲ್ಲಿ ತೆಗೆದಿದ್ದ ಫೋಟೋ ಪರಪ್ಪನ ಅಗ್ರಹಾರದಿಂದ ಕಂಡೋರ ಮೊಬೈಲಿಗೆ ಹೊಕ್ಕು ಹರಿದಾಡಿತ್ತು. ತೀರಾ ಪರಪ್ಪನ ಅಗ್ರಹಾರದ ಕಂಪ್ಯೂಟರ್ ಕಡತದಲ್ಲಿದ್ದ ಫೋಟೋ ಲೀಕಾದದ್ದು ಗಂಭೀರ ವಿಚಾರ ಅಂತ ಗೃಹ ಸಚಿವರಿಗಾಗಲಿ, ಆಳೋ ಸರ್ಕಾರಕ್ಕಾಗಲಿ ಅನ್ನಿಸಲೇ ಇಲ್ಲ. ಬಹುಶಃ ಆ ಹಂತದಲ್ಲಿ ಪರಪ್ಪನ ಅಗ್ರಹಾರವನ್ನು ಅಧ್ವಾನವೆಬ್ಬಿಸಿದ್ದ ಸುರೇಶನಂಥಾ ಅಡ್ನಾಡಿ ಅಧಿಕಾರಿಯ ಬುಡಕ್ಕೊದ್ದು ಹೊರಗಟ್ಟಿದ್ದರೆ, ಇಂಥಾ ಅಧಿಕಾರಿಗಳ ನೆರಳಿನಂತೆ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಹುಡುಕಿ ಸೂಕ್ತ ಕ್ರಮ ಕೈಗೊಂಡಿದ್ದಿದ್ದರೆ ಅಷ್ಟರ ಮಟ್ಟಿಗೆ ಈ ಸರ್ಕಾರದ ನಡೆ ಪ್ರಶಂಶೆಗೆ ಪಾತ್ರವಾಗುತ್ತಿತ್ತು.
ಆದರೆ, ಗೃಹ ಸಚಿವ ಜಿ. ಪರಮೇಶ್ವರ್ ಪರಪ್ಪನ ಅಗ್ರಹಾರದ ವಿಚಾರದಲ್ಲಿ ಮತ್ತಷ್ಟು ಅಧ್ವಾನಗಳಾಗುವಂಥಾ ನಡೆಯನ್ನೇ ಅನುಸರಿಸುತ್ತಾ ಮುನ್ನಡೆದಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ತಗುಲಿಕೊಂಡಿರುವ ರನ್ಯಾ ರಾವ್ಗೂ, ಪರಂಗೂ ಇರುವ ವ್ಯಾವಹಾರಿಕ ಕನೆಕ್ಷನ್ನುಗಳು ಯಾವತ್ತೋ ಬಯಲಾಗಿವೆ. ಇದೀಗ ಅದೇ ರನ್ಯಾ ತನ್ನ ಗೆಣೆಕಾರ ತರುಣ್ ವಿರಾಟ್ ಕೊಂಡೂರನ ಸಮೇತ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದಾಳೆ. ಇದೀಗ ವೈರಲ್ ಆಗಿರೋ ವೀಡಿಯೋಗಳಲ್ಲಿ ಭಯೋತ್ಪಾದಕ ಶಕೀಲ್ ಮುನ್ನ, ವಿಕೃತ ಕಾಮಿ ಉಮೇಶ್ ರೆಡ್ಡಿ ಜೊತೆಗೆ ರನ್ಯಾ ರಾವ್ ಗೆಳೆಯ ತರುಣ್ ಕೂಡಾ ಇದ್ದಾನೆ. ಇವರೆಲ್ಲರೂ ಜೈಲೊಳಗೆ ವೈಭೋಗದ ಬದುಕು ನಡೆಸುತ್ತಿರೋ ವೀಡಿಯೋದಿಂದಾಗಿ ಈ ಸರ್ಕಾರದ ಮಾನ ಹರಾಜಾಗಿಸಿದೆ. ಈ ಹಂತದಲ್ಲಿ ತಲೆನೆಟ್ಟಗಿರುವ ಗೃಹಸಚಿವನೊಬ್ಬ ಇದ್ದಿದ್ದರೆ, ಆತ ಈ ವೀಡಿಯೋದಲ್ಲಿರುವಂತೆ ಕ್ರಿಮಿಗಳಿಗೆ ಅಂಥಾ ಸೌಕರ್ಯ ಕೊಟ್ಟವರ್ಯಾರು ಅನ್ನೋದನ್ನು ಪತ್ತೆಹಚ್ಚಲು ಮುಂದಾಗುತ್ತಿದ್ದರು. ಆದರೆ, ಈ ಪರಮೇಶ್ವರ್ ವೀಡಿಯೋ ಲೀಕ್ ಮಾಡಿದ್ಯಾರೆಂಬ ಬಗ್ಗೆ ತಲೆಕೆಡಿಸಿಕೊಂಡು ತಲಾಶಿಗಿಳಿಯುತ್ತಾರೆಂದರೆ, ಅವರ ಅಸಲೀ ಆಧ್ಯತೆ ಏನೆಂಬುದು ಯಾರಿಗಾದರೂ ಅರ್ಥವಾಗುತ್ತೆ!
ಸುರೇಶನ ಮೇಲೇಕೆ ಅಕ್ಕರೆ?
ಇದುವರೆಗೂ ಪರಪ್ಪನ ಅಗ್ರಹಾರದ ಅಂದಾದುಂದಿಗಳು ಜಾಹೀರಾದಾಗೆಲ್ಲ ಅಮಾಯಕರನ್ನು ಅಮಾನತುಗೊಳಿಸಿ ತ್ಯಾಪೆ ಹಚ್ಚುವ ಪ್ರಯತ್ನಗಳೇ ಹೆಚ್ಚಾಗಿ ನಡೆದುಕೊಂಡು ಬಂದಿವೆ. ಈ ಹಿಂದೆ ಗುಬ್ಬಚ್ಚಿ ಸೀನನ ಬರ್ತ್ಡೇ ಆಚರಣೆ ಪ್ರಕರಣದಲ್ಲಿಯೂ ಖಾಕಿ ಗುಬ್ಬಚ್ಚಿಗಳ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿತ್ತು. ಈ ಬಾರಿಯೂ ಕೂಡಾ ಒಂದಷ್ಟು ಕರ್ತವ್ಯ ನಿಷ್ಠೆ ಉಳಿಸಿಕೊಂಡಿದ್ದವರನ್ನು ಅಮಾನತುಗೊಳಿಸಿ, ಪರಪ್ಪನ ಅಗ್ರಹಾರದ ವ್ಯವಸ್ಥೆ ಹಡಾಲೇಳಲು ಪ್ರಮುಖ ಕಾರಣನಾದ ಜೈಲಾಧಿಕಾರಿ ಸುರೇಶನನ್ನು ವರ್ಗಾವಣೆ ಮಾಡಲಾಗಿದೆ. ಈ ಸುರೇಶನ ಮೇಲಿರೋ ಆರೋಪಗಳು ಒಂದೆರಡಲ್ಲ. ಹಾಗಿದ್ದರೂ ಯಾಕೆ ಆತ ಪದೇ ಪದೆ ಬಚಾವಾಗುತ್ತಿದ್ದಾನೆ ಎಂಬ ನಿಟ್ಟಿನಲ್ಲಿ ನೋಡ ಹೋದರೆ, ನೇರಾನೇರ ಗೃಹಸಚಿವನ ಕೃಪಾಕಟಾಕ್ಷದ ಕಹಾನಿಯೊಂದು ಬಯಲಾಗುತ್ತೆ.
ಈತ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಬಂಧಿಯಾಗಿರುವ ಮಾಯಾಂಗನೆ ರನ್ಯಾ ರಾವ್ ಗೂ ಕೂಡಾ ಸಕಲ ಸೌಲಭ್ಯಗಳನ್ನು ಕೊಟ್ಟಿದ್ದಾನೆಂಬ ಮಾತಿದೆ. ತನ್ನದೇ ಮೊಬೈಲಿನ ಮೂಲಕ ರನ್ಯಾ ರಾವ್ ಪರಂ ಜೊತೆ ಮಾತಾಡಲು ಸುರೇಶ ಅವಕಾಶ ಮಾಡಿ ಕೊಟ್ಟಿದ್ದನಾ? ಅಂಥಾ ವೀಡಿಯೋ ಕಾಲ್ಗಳನ್ನು ಚಾಲಾಕಿ ಸುರೇಶ ರೆಕಾರ್ಡು ಮಾಡಿಟ್ಟುಕೊಂಡಿದ್ದನಾ? ಒಂದು ವೇಳೆ ಆತನನ್ನು ಒತ್ತಡಕ್ಕೆ ಮಣಿದು ಅಮಾನತುಗೊಳಿಸಿದರೆ, ತನ್ನ ಅಸಲೀ ಕಥೆ ಬೀದಿಗೆ ಬರುತ್ತದೆಂಬ ಭಯದಿಂದ ಪರಂ ಸುರೇಶನ ತಲೆ ಕಾಯುತ್ತಿದ್ದಾರಾ? ಹೀಗೆ ಪೊಲೀಸ್ ವಲಯದಲ್ಲಿಯೇ ನಾನಾ ದಿಕ್ಕಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ರನ್ಯಾ ರಾವ್ ಆಟಗಳು ಎಂಥಾದ್ದಿವೆಯೆಂದರೆ, ತನ್ನ ಗೆಣೆಜಕಾರನಿಗೂ ರಾಜಾತಿಥ್ಯ ಸಿಗುವಂತೆ ನೋಡಿಕೊಂಡಿದ್ದಾಳೆ. ಇದೆಲ್ಲವೂ ಪರಂ ನೆರಳಿಲ್ಲದೆ ನಡೆಯಲು ಸಾಧ್ಯವೇ?
ನಿಂಬೆಹಣ್ಣು ರೇವಣ್ಣನ ಕೈಚಳಕ
ಕಾನೂನು ಕಟ್ಟಳೆಗಳನ್ನು ಬಲಿಕೊಟ್ಟು, ಅಧಿಕಾರಸ್ಥರ ಬೂಟು ನೆಕ್ಕಲು ನಿಂತ ಅಧಿಕಾರಿಯೋರ್ವನಿಗೆ ನಾನಾ ಆಯಾಮಗಳ ನಂಟಿರುತ್ತದೆ. ಈ ಹಿಂದೆ ಪರಪ್ಪನ ಅಗ್ರಹಾರದ ಜೈಲಾಧಿಕಾರಿಯಾಗಿದ್ದ ಸುರೇಶನನ್ನು ಗೃಹಸಚಿವ ಮಾತ್ರವೇ ಕಾಪಾಡುತ್ತಿದ್ದಾರೆ ಅಂದುಕೊಳ್ಳುವಂತಿಲ್ಲ. ಯಾಕೆಂದರೆ, ಸುರೇಶ ಅಧಿಕಾರ ಬಳಸಿಕೊಂಡು ಎಲ್ಲ ಕ್ರಿಮಿಗಳಿಗೂ ಸೇವೆ ಮಾಡಿದ್ದಾನೆ. ಎಳೇ ಹುಡುಗಿಯರು ಮಾತ್ರವಲ್ಲ; ಹಳೇ ಮುದುಕಿಯರನ್ನೂ ಬಿಡದ ಪರಮ ಕಾಮುಕ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಸೇರಿಕೊಂಡು ವರ್ಷ ಕಳೆದಿದೆ. ಹಾಗೆ ಆತ ಜೈಲು ಪಾಲಾದಾಗಿನಿಂದಲೂ ಸುರೇಶನ ಕಡೆಯಿಂದ ರಾಜಾತಿಥ್ಯ ನಡೆಯುತ್ತಾ ಬಂದಿತ್ತೆಂದು ಪರಪ್ಪನ ಅಗ್ರಹಾರದ ಪಡಸಾಲೆಯಲ್ಲಿ ಗುಲ್ಲೆದ್ದಿದೆ. ಅಂಥಾದ್ದೊಂದು ವೈಭೋಗ ರೇಪಿಸ್ಟ್ ಪ್ರಜ್ವಲ್ಗೆ ದಕ್ಕಿರೋದರ ಹಿಂದೆ ಆತನ ಪಿತಾಶ್ರೀ ರೇವಣ್ಣನ ಶ್ರಮವಿದೆ.
ಹೇಳಿಕೇಳಿ ರೇವಣ್ಣ ಮುಖ್ಯಮಂತ್ರಿ ಸಿದ್ಧರಾಮಯ್ಯ ಜೊತೆ ಆತ್ಮೀಯ ಬಂಧ ಹೊಂದಿದ್ದಾರೆ. ಈಗಂತೂ ತನ್ನ ಕಚ್ಚೆಹರುಕ ಬುದ್ಧಿಯಿಂದ ದೇವೇಗೌಡರ ಪಾಳೆಯದಿಂದ ರೇವಣ್ಣ ಫ್ಯಾಮಿಲಿ ಹೊರದಬ್ಬಿಸಿಕೊಂಡಿದೆ. ಅನಧಿಕೃತವಾಗಿ ಜೆಡಿಎದಸ್ನಿಂದ ಭಹಿಷ್ಕಾರಕ್ಕೀಡಾಗಿರೋ ರೇವಣ್ಣ ತನ್ನ ಸಹೋದರ ಕುಮಾರಣ್ಣನ ಮೇಲೆ ನಖಶಿಖಾಂತ ಕೋಪವಿಟ್ಟುಕೊಂಡಿದ್ದಾರೆ. ಇಂಥಾ ಸಮಾನ ಮನಃಸ್ಥಿತಿ ಹೊಂದಿರುವ ಸಿದ್ದಣ್ಣನಿಗೆ ದುಂಬಾಲು ಬಿದ್ದಿದ್ದ ರೇವಣ್ಣ ಪ್ರಜ್ವಲ್ಗೆ ರಾಜಾತಿಥ್ಯ ದೊರೆಯುವಂತೆ ಮಾಡಿದ್ದರೆ ಅಚ್ಚರಿಯೇನಿಲ್ಲ. ಸಿದ್ದಣ್ಣನ ಕಡೆಯಿಂದ ಇಂಥಾದ್ದೊಂದು ಸೀಕ್ರೆಟ್ ಠರಾವು ಪರಂ ಮೂಲಕ ಸುರೇಶನಿಗೆ ರವಾನೆಯಾಗಿರಬಹುದು. ಈಗಂತೂ ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆಯಾಗಿದೆ. ಇಂಥಾ ಹೊತ್ತಿನಲ್ಲಿ ಸುರೇಶ ತೊಲಗಿದರೆ, ತನ್ನ ಮಗ ಅನಾಥ ಶಿಶುವಾಗುತ್ತಾನೆಂಬ ಭಯ ರೇವಣ್ಣನನ್ನು ಆವರಿಸಿದಂತಿದೆ. ಒಂದು ಮೂಲದ ಪ್ರಕಾರ, ರೇವಣ್ಣ ಈ ಕ್ಷಣದವರೆಗೂ ಸುರೇಶನ ತಲೆ ಕಾಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸುರೇಶನ ಮೇಲೆ ಗಂಭೀರ ಆರೋಪಗಳಿರೋದರಿಂದ ಬೇರೆ ನಿರ್ವಾಹವಿಲ್ಲದೆ ಗೃಹ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ!
ನಿಜಕ್ಕೂ ಆಗಬೇಕಿದ್ದದ್ದೇನು?

ಪರಪ್ಪನ ಅಗ್ರಹಾರದೊಳಗೆ ಸ್ವಚ್ಛಂದವಾಗಿರೋ ವಿಕೃತಕಾಮಿ, ಭಯೋತ್ಪಾದಕರು ಮತ್ತು ವಂಚಕರ ಪುರಾಣ ಬಯಲಾಗುತ್ತಲೇ ಸರ್ಕಾರದ ಕಡೆಯಿಂದ ಖಡಕ್ಕಾದ ಕ್ರಮ ಜರುಗಬೇಕಿತ್ತು. ಪರಂಗೆ ಬೆನ್ನ ಹುರಿ ನೆಟ್ಟಗಿದ್ದಿದ್ದರೆ, ಈ ವೀಡಿಯೋ ಲೀಕ್ ಮಾಡಿದ್ಯಾರೆಂಬ ಬಗ್ಗೆ ತನಿಖೆ ನಡೆಸುತ್ತಿರಲಿಲ್ಲ. ಅದರ ಭಾಗವಾಗಿ ದರ್ಶನ್ ಆಪ್ತ ಧನ್ವೀರನನ್ನು ವಿಚಾರಣೆಗೊಳಪಡಿಸುವ ಜೋಕೊಂದು ನಡೆಯುತ್ತಿರಲಿಲ್ಲ. ಹಾಗಾದರೆ, ನಿಜಕ್ಕೂ ಆಗಬೇಕಿದ್ದದ್ದು, ಮುಂದಾದರೂ ಆಗಲೇ ಬೇಕಿರೋದೇನು? ಈ ಪ್ರಶ್ನೆಗೆ ನಿಖರ ಉತ್ತರ ಲಾಗಾಯ್ತಿನಿಂದಲೂ ರೆಡಿಯಿದೆ. ಪ;ರಪ್ಪನ ಅಗ್ರಹಾರವನ್ನು ದಂಧೆಯ ಉಗ್ರಾಣವಾಗಿಸಿರುವ ಖೂಳ ಅಧಿಕಾರಿಗಳನ್ನು ಖಾಕಿ ಕಳಚಿ ಹೊರದಬ್ಬೋದು ಮತ್ತು ಖಡಕ್ಕಾದ, ಸಾಮಾಜಿಕ ಕಳಕಳಿ ಇರುವ ನಿಷ್ಠಾವಂತ ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ತಂದು ಕೂರಿಸುವ ಕೆಲಸ ನಿಜಕ್ಕೂ ಆಗಬೇಕಿದೆ.
ಈವತ್ತಿಗೆ ಮಾಲಿನಿ ಕೃಷ್ಣಮೂರ್ತಿಯ ಭಂಟನಾಗಿದ್ದ ಮುಖ್ಯ ಜೈಲು ಅಧೀಕ್ಷಕನಾಗಿದ್ದ ಸುರೇಶನ ಜೊತೆಗೆ ಮತ್ತೊಂದಷ್ಟು ಭ್ರಷ್ಟ ಹೆಗ್ಗಣಗಳು ಪರಪ್ಪನ ಅಗ್ರಹಾರದಲ್ಲಿವೆ. ಅಸಿಸ್ಟೆಂಟ್ ಸೂಪರಿಡೆಂಟ್ ಕರ್ಣ ಕ್ಷತ್ರಿಯ, ಅಶೋಕ್ ಭಜಂತ್ರಿಯಂಥಾ ಕಂತ್ರಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ. ಇದು ಹೇಳಿಕೇಳಿ ಬಹುದೊಡ್ಡ ಜೈಲಾಗಿರೋದರಿಂದ, ಸರಿಕಟ್ಟಾದ ಜಾಗಗಳಲ್ಲಿ ಭ್ರಷ್ಟ ಅಧಿಕಾರಿಗಳು ತಮ್ಮ ನೆಂಟರೇ ಇರುವಂತೆ ನೋಡಿಕೊಂಡಿದ್ದಾರೆ. ಇಂಥವರ ಕಾರಣದಿಂದಲೇ ಭಯೋತ್ಪಾದಕರ ಕೈಯಲ್ಲಿಯೂ ಮೊಬೈಲು ಕುಣಿದಾಡುತ್ತಿದೆ. ಕ್ರಿಮಿನಲ್ಲುಜಗಳು ಎಣ್ಣೆ ಪಾರ್ಟಿ ನಡೆಸುತ್ತಾ ಹಾಯಾಗಿದ್ದಾರೆ. ವಿಕೃತ ಕಾಮಿ ಉಮೇಶ ಯಾರ್ಯಾರೊಂದಿಗೋ ಮೊಬೈಲಿನಲ್ಲಿ ಹರಟುತ್ತಾ ಓಡಾಡಿಕೊಂಡಿದ್ದಾನೆ. ಇನ್ನು ನಾನಾ ಅಪರಾಧ ಪ್ರಕರಣ ಗಳಲ್ಲಿ ಭಾಗಿಯಾಗಿ ಒಳ ಬಂದಿರುವ ಕೈದಿಗಳಿಗೂ ಇಂಥಾ ಸೌಕರ್ಯಗಳ ಭಾಗ್ಯವನ್ನು ಕರುಣಿಸಲಾಗಿದೆ. ಅದಕ್ಕೆ ಕಾರಣರಾದವರ ಅಂಡಿಗೊದ್ದು ಹೊರಗಟ್ಟುವ ಗತ್ತು ಗೃಹಸಚಿವನಿಗಂತೂ ಇಲ್ಲ. ಎಲ್ಲ ಮುಲಾಜುಗಳಾಚೆಗೆ ಪರಪ್ಪನ ಅಗ್ರಹಾರದ ಅವ್ಯವಸ್ಥೆಗಳ ಬಗ್ಗೆ ಸಿದ್ದರಾಮಯ್ಯನವರಾದರೂ ಗಮನ ಹರಿಸುವ ತುರ್ತಿದೆ.
ದರ್ಶನ್ಗೆ ರಾಜಾತಿಥ್ಯ ನೀಡಿದ ಕೇಸಿನಲ್ಲಿ ಒಂದಷ್ಟು ಜೈಲಾಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತಲ್ಲಾ? ಆಗ ಈ ಹಿಂದೆ ಬಂಧೀಖಾನೆ ಡಿಜಿಯಾಗಿದ್ದ ಮಾಲಿನಿ ಕೃಷ್ಣಮೂರ್ತಿಯ ಕೃಪಾಶೀರ್ವಾದದಿಂದ ಮುಖ್ಯ ಅಧೀಕ್ಷಕನಾಗಿ ಒಲಕ್ಕರಿಸಿಕೊಂಡಿದ್ದವನು ಸುರೇಶ. ಈ ಬೃಹತ್ ಬಂಧೀಖಾನೆಯನ್ನು ಸಂಭಾಳಿಸುವ ಯಾವ ನುಭವವೂ ಇಲ್ಲದ ಸುರೇಶ, ಅದಾಗಲೇ ಅಲ್ಲಿ ಗೆಬರಲು ನಿಂತಿದ್ದ ಪಟಾಲಮ್ಮಿನ ಸೂತ್ರಧಾರಿಕೆ ವಹಿಸಿಕೊಂಡಿದ್ದ. ಅಸಿಸ್ಟೆಂಟ್ ಸೂಪರಿಡೆಂಟ್ ಕರ್ಣ ಕ್ಷತ್ರಿಯ ಮತ್ತು ಅಶೋಕ್ ಭಜಂತ್ರಿ ತಮ್ಮ ಅಧೀನದಲ್ಲಿರುವ ಒಂದಷ್ಟು ಜೈಲರುಗಳನ್ನು ದಂಧೆಗಿಳಿಸಿದ್ದರು. ಜೈಲರುಗಳಾದ ಕಾಂತಪ್ಪ, ಗೋಪಿನಾಥ್, ಎಸ್.ಎಂ, ಬೆಳಗಾವಿ ಮುಂತಾದವರು ಲಕ್ಷಣವಾಗಿ ಎಲ್ಲದರಲ್ಲೂ ಕಮಾಯಿ ನಡೆಸಲಾರಂಭಿಸಿದ್ದರು!
ಬೆಚ್ಚಿಬೀಳಿಸೋ ದಂಧೆ

ಇದೀಗ ಅಮಾನತು ಶಿಕ್ಷೆಯಿಂದ ಈ ಕ್ಷಣಕ್ಕೆ ಬಚಾವಾಗಿ, ವರ್ಗಾವಣೆಗೊಂಡಿರುವ ಮಾಜೀ ಮುಖ್ಯ ಅಧೀಕ್ಷಕರ ಸುರೇಶನ ಲೀಲೆಗಳು ಒಂದೆರಡಲ್ಲ. ಪರಿವರ್ತನೆಯ ಕೇಂದ್ರವಾಗಬೇಕಿದ್ದ ಪರಪ್ಪನ ಅಗ್ರಹಾರವನ್ನೀತ ಅಕ್ಷರಶಃ ದಂಧೆಗಳ ಕಾರಸ್ಥಾನವಾಗಿಸಿ ಬಿಟ್ಟಿದ್ದ. ಯಾಕೆ ಈತನ ಮೇಲೆ ಕಠಿಣ ಕ್ರಮ ಜರುಗಬೇಕೆಂಬ ಪ್ರಶ್ನೆಯೇನಾದರೂ ನಿಮ್ಮಲ್ಲಿದ್ದರೆ, ಆತ ಮಾಡಿರುವ ಘನ ಕಾರ್ಯದ ವಿವರಗಳೇ ಅದಕ್ಕುತ್ತರವಾಗಿ ನಿಲ್ಲುತ್ತವೆ. ಥೇಟು ದಂಧೆಕೋರನಂತೆ ಪ್ರತಿಯೊಂದಕ್ಕೂ ದರಪಟ್ಟಿ ನಿಗಧಿಗೊಳಿಸಿದ್ದ ಸುರೇಶ, ಹಂತ ಹಂತವಾಗಿ ಪರಪ್ಪನಗ್ರಹಾರದ ವಾತಾವರಣವನ್ನು ಮತ್ತಷ್ಟು ಹದಗೆಡಿಸಿಬಿಟ್ಟಿದ್ದ. ಯಾವನೇ ಕ್ವಾರಂಟೈನ್ ರೂಮಿನಿಂದ ನೇರವಾಗಿ ಸ್ಪೆಷಲ್ ಸೆಲ್ ಬ್ರಾರಕ್ಕಿನೊಳಗೆ ಪ್ರವೇಶ ಪಡೆಯಲು ಸುರೇಶನ ದರ್ಭಾರಿನಲ್ಲಿ ಒಂದು ಲಕ್ಷ ನಿಗಧಿಯಾಗಿತ್ತು.
ಈ ಬಾರಿ ವೈರಲ್ ಆಗಿದ್ದ ವೀಡಿಯೋ ನೋಡಿದವರಿಗೆ ಆಂಡ್ರಾಯ್ಡ್ ಮೊಬೈಲು ಭಯೋತ್ಪಾದಕರು ಮತ್ತು ವಿಕೃತ ಕಾಮಿಯ ಕೈಗವೆ ಸಿಕ್ಕಿದ್ದು ಹೇಗೆಂಬ ಪ್ರಶ್ನೆ ಮೂಡಿಕೊಂಡಿತ್ತು. ಅದಕ್ಕೂ ಕೂಡಾ ಸುರೇಶನ ದಂಧೆಗಳ ಹಿಸ್ಟರಿಯಲ್ಲೇ ಉತ್ತರ ಅಡಗಿದೆ. ಈತನ ದರ್ಭಾರಿನಲ್ಲಿ ಇಂಥಾ ಅಚ್ಚುಕಟ್ಟಾದ ಮೊಬೈಲ್ ಸೇವೆಗೆ ಒಂದು ಲಕ್ಷ ರೂಪಾಯಿ ನಿಗಧಿಯಾಗಿತ್ತು. ವಿಐಪಿ ಸೆಲ್ಲುಗಳಿಗಂತೂ ತಿಂಗಳಿಗೆ ಲಕ್ಷಗಟ್ಟಲೆ ಬಾಡಿಗೆ ನಿಗಧಿಯಾಗಿತ್ತು. ಒಂದು ಸೆಲ್ಲಿನಿಂದ ಮತ್ತೊಂದಕ್ಕೆ ಶಿಫ್ಟ್ ಮಾಡಲು ಕನಿಷ್ಠ ಒಂದು ಲಕ್ಷ ನಿಗಧಿಯಾಗಿತ್ತು. ಇನ್ನುಳಿದಂತೆ ಸ್ಪೆಷಲ್ ಎಂಟ್ರಿ, ನಾರ್ಮಲ್ ಎಂಟ್ರಿ ಸೇರಿದಂತೆ ಎಲ್ಲದಕ್ಕೂ ಸಾವಿರಗಟ್ಟಲೆ ರೊಕ್ಕದ ಚಾರ್ಟು ನಿಗಧಿಯಾಗಿತ್ತು. ಇದಕ್ಕಿಂತಲೂ ಭಯಾನಕ ವಿಚಾರವೆಂದರೆ, ಜೈಲಿನ ಭದ್ರತಾ ಸಿಬ್ಬಂದಿಯೇ ಎಂಡಿಎಂ ಗುಳಿಗೆ, ಗಾಂಜಾ, ಹಶೀಶ್ ಮುಂತಾದ ದ್ರಗ್ಸ್ಗಳನ್ನು ದುಪ್ಪಟ್ಟು ರೇಟಿಗೆ ಮಾರೋ ದಲ್ಲಾಳಿಗಳಂತಾಗಿದ್ದಾರೆಂಬ ಘನ ಗಂಭೀರ ಆರೋಪವಿದೆ!
ಹೀಗೆ ದೋಚಿಕೊಂಡ ಕಾಸಿನಲ್ಲಿಯೇ ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ ವರ್ಗದ ಕೆಲ ಮಂದಿ ಕೋಟಿ ಕುಳಗಳಾಗಿ ಮೆರೆಯುತ್ತಿದ್ದಾರೆ. ಇಂಥಾ ಕೂಳುಬಾಕ ಅಧಿಕಾರಿಗಳಿಗೆ ಕಾಸಿನ ರುಚಿ ತೋರಿಸಿದರೆ ಭಯೋತ್ಪಾದಕರಿಗೂ ಕೇಳಿದ್ದೆಲ್ಲ ಸಿಗುತ್ತದೆ. ಈ ಪಟಾಲಮ್ಮಿಗಾಗಿಯೇ ದನದ ಮಾಂಸ ಮತ್ತು ಮೊಬೈಲುಗಳೂ ಜೈಲೊಳಗೆ ತೂರಿಕೊಳ್ಳುತ್ತವೆ. ದಯಾನಂದ್ ಅವರು ಎಂಟ್ರಿ ಕೊಟ್ಟ ಮೇಲೆ ಇಂಥಾ ಒಂದಷ್ಟು ದಂಧೆಗಳಿಗೆ ಕಡಿವಾಣ ಹಾಕಲು ಯತ್ನಿಸಿದ್ದರೂ ಕೂಡಾ ಕೆಳಹಂತದ ಅಧಿಕಾರಿಗಳು ಎಲ್ಲವನ್ನೂ ಬಾಚಿಕೊಂಡು, ಸಿಕ್ಕಿದ್ದನ್ನು ಹಂಚಿಕೊಂಡು ಮಜವಾಗಿದ್ದಾರೆ. ಇವರೆಲ್ಲ ಎಂಥಾ ಅಡ್ನಾಡಿಗಳೆಂದರೆ, ಯಾವ ಥರದ ಕ್ರಿಮಿನಲ್ಲುಗಳಿಗೂ ಕೂಡಾ ಬರ್ತ್ಡೇ ಪಾರ್ಟಿ ಆಚರಿಸೋದೂ ಸೇರಿದಂತೆ, ಹೊರಜಗತ್ತಿನ ಫೀಲ್ ಮೂಡಿಸಲು ಕಟಿಬದ್ಧರಾಗಿ ನಿಂತಿದ್ದಾರೆ. ಇಂಥವರು ಲೂಟಿ ಕಾಸಲ್ಲಿ ಖರೀದಿಸಿದ ಆಸ್ತಿ, ಕೋಟಿ ಕಿಮ್ಮತ್ತಿನ ಕಾರ್ನರ್ ಸೈಟುಗಳ ವಿವರವನ್ನು ಸರಿಕಟ್ಟಾದ ತನಿಖೆಯೊಂದು ಸಾಕ್ಷಿ ಸಮೇತ ಜಾಹೀರು ಮಾಡುತ್ತದೆ. ಆದರೆ, ನಮ್ಮ ಗೃಹ ಸಚಿವರು ಮಾತ್ರ ವೀಡಿಯೋದಲ್ಲಿರುವ ಅಧ್ವಾನಕ್ಕೆ ಕಾರಣರಾದ ಇಂಥಾ ಭ್ರಷ್ಟರ ಅಂಡಿಗೊದ್ದು ಹೊರದಬ್ಬೋದನ್ನು ಬಿಟ್ಟು, ವೀಡಿಯೋ ಲೀಕ್ ಮಾಡಿದ್ಯಾರೆಂಬುದರ ಬಗ್ಗೆ ತಲೆಕೆಡಿಸಿಕೊಂಡು ಕೂತಿದ್ದಾರೆ!
ಮತ್ತೊಂದು ವಿವಾದ!
ದಿವ್ಯಶ್ರೀ ಈಗ ಪರಪ್ಪನ ಅಗ್ರಹಾರ ಬಂಧಿಖಾನೆಯ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಜೈಲಿನಲ್ಲಿ ಭಯೋತ್ಪಾದಕರು ಕೈಲಿ ಮೊಬೈಲು ಹಿಡಿದು ಅಡ್ಡಾಡುತ್ತಿರುವಾಗ, ವಿಕೃತ ಕಾಮಿ ಉಮೇಶ್ ರೆಡ್ಡಿ ಸುಖದ ಸುಪ್ಪತ್ತಿಗೆಯಲ್ಲಿ ಮಿಂದೇಳುತ್ತಿರುವಾಗ, ವಂಚಕರು, ಕ್ರಿಮಿನಲ್ಲುಗಳು ಜೈಲೊಳಗೇ ಎಣ್ಣೆ ಪಾರ್ಟಿ ನಡೆಸುತ್ತಿರುವಾಗ ಅದೆಲ್ಲವನ್ನೂ ನೋಡಿ ಕಣ್ಮುಚ್ಚಿ ಕುಳಿತಿದ್ದರಾ? ಇಂಥಾ ಅಕ್ರಮಗಳಿಂದ ಸಂಗ್ರಹವಾದ ಹಣದಲ್ಲಿ ಪಾಲು ಪಡೆದು ಸುಮ್ಮನಿದ್ದರಾ ಎಂಬಂಥಾ ಗುಮಾನಿಗಳು ಸಹಜವಾಗಿಯೇ ಕಾಡುತ್ತದೆ. ಇದೀಗ ಇಂಥಾ ನಾನ್ ಐಪಿಎಸ್ ಅಧಿಕಾರಿಣಿಯ ಕೈಕೆಳಗೆ ಓರ್ವ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡುವ ಮೂಲಕ ಪರಂ ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ!

ಓರ್ವ ನಾನ್ ಐಪಿಎಸ್ ಅಧಿಕಾರಿಗೆ ಸೆಲ್ಯೂಟ್ ಹೊಡೆದು, ಐಪಿಎಸ್ ಅಧಿಕಾರಿಯೋರ್ವ ಚಾರ್ಜ್ ತೆಗೆದುಕೊಳ್ಳೋದು ಸಾಧ್ಯವಾ? ಇದು ಒಂದು ರೀತಿಯಲ್ಲಿ ಐಪಿಎಸ್ ಅಧಿಕಾರಿ ಅಂಶುಕುಮಾರ್ ಅವರಿಗೆ ಅವಮಾನ ಮಾಡಿದಂತಲ್ಲವೇ? ೨೦೧೯ರ ಬ್ಯಾಚಿನ ಐಪಿಎಸ್ ಅಧಿಕಾರಿಯಾದ ಅಂಶುಕುಮಾರ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಸೂಪರಿಡೆಂಟ್ ಆಗಿ ಪರಮೇಶ್ವರ್ ನೇಮಿಸಿದ್ದಾರೆ. ಈ ಬಗ್ಗೆ ವಿರೋಧ ಪಕ್ಷಗಳೂ ಕೂಡಾ ಸರ್ಕಾರದ ನಡೆಯನ್ನು ಟೀಕಿಸುತ್ತಿವೆ. ಯಾಕೆಂದರೆ, ಇದು ಕಾನ್ಸ್ಟೇಬಲ್ ಕೈಕೆಳಗೆ ಇನ್ಸ್ಪೆಕ್ಟರ್ ಅನ್ನು ನೇಮಿಸಿದಂಥಾದ್ದೇ ಪ್ರಕ್ರಿಯೆ. ಇದೊಂದು ತಾತ್ಕಾಲಿಕ ನೇಮಕ ಅಂತೆಲ್ಲ ಸರ್ಕಾರದ ಕಡೆಯಿಂದ ತಿಪ್ಪೆ ಸಾರಿಸುವ ಕೆಲಸ ನಡೆದಿದೆ. ಆದರೆ, ಮಾನ್ಯ ಗೃಹ ಸಚಿವರು ಇಂತಾ ಯಡವಟ್ಟುಗಳನ್ನ ಗೊತ್ತಿದ್ದೇ ಮಾಡುತ್ತಾರಾ ಅಥವಾ ಗೊತ್ತಿಲ್ಲದೆ ಇಂಥಾ ಪವಾಡಗಳು ನಡೆಯುತ್ತಿವೆಯಾ ಅನ್ನೋದೇ ಈ ನಾಡಿನ ಬಡಪಾಯಿ ನಾಗರಿಕರಿಗೆ ಗೊತ್ತಾಗುತ್ತಿಲ್ಲ!
ಒಟ್ಟಾರೆಯಾಗಿ ಸರ್ಕಾರದ ನೆರಳಲ್ಲಿ ಪರಪ್ಪನ ಅಗ್ರಹಾರದೊಳಗೆ ಅಕ್ಷರಶಃ ದಂಧೆ ನಡೆಯುತ್ತಿದೆ. ಭಯೋತ್ಪಾದಕರಿಗೆ ಜೈಲೊಳಗೇ ಸವಲತ್ತುಗಳನ್ನು ನೀಡೋದಿದೆಯಲ್ಲಾ? ಅದು ನಿಜಕ್ಕೂ ಶುದ್ಧ ದೇಶದ್ರೋಹದ ಕೆಲಸ. ಇನ್ನು ವಿಕೃತ ಕಾಮಿ ಉಮೇಶ್ ರೆಡ್ಡಿಯ ಕಾಸಿಗೂ ಕೈಚಾಚುತ್ತಾರೆಂದರೆ, ಅಂಥಾ ಹೇಸಿಗೆ ಹುಳುವಿಗೂ ಸೌಕರ್ಯ ಕಲ್ಪಿಸುತ್ತಾರೆಂದರೆ, ಅಂಥಾ ಜೈಲಾಧಿಕಾರಿಗಳನ್ನೂ ಕೂಡಾ ವಿಕೃತರೆಂದೇ ಪರಿಗಣಿಸಬೇಕಾಗುತ್ತದೆ. ಇದೆಲ್ಲದರ ಮೂಲಕ ಗೃಹ ಸಚಿವ ಪರಮೇಶ್ವರ್ ಓರ್ವ ಅಸಮರ್ಥ ಎಂಬ ಆರೋಪಕ್ಕೆ ಮತ್ತಷ್ಟು ಬಲ ಬಂದಿದೆ. ಪರಪ್ಪನ ಅಗ್ರಹಾರದ ವೀಡಿಯೋ ಲೀಕ್ ಆದ ನಂತರ ಪರಂ ಇಟ್ಟ ಪ್ರತೀ ನಡೆಯೂ ಕೂಡಾ ಅವರ ರಾಜಕೀಯ ಬದುಕಿನ ಕಪ್ಪು ಚುಕ್ಕೆಯಾಗಿ ದಾಖಲಾಗುತ್ತದೆ. ಇದೆಲ್ಲವನ್ನು ನೋಡಿದ ಮಂದಿ ಗೊತ್ತಿಲ್ಲ ಖ್ಯಾತಿಯ ಗೃಹಸಚಿವರಿಗೆ ಮಾನ ಮರ್ಯಾದೆ ಅಂದ್ರೇನು ಗೊತ್ತಾ ಅಂತ ಆಕ್ರೋಶಿತರಾಗಿ ಪ್ರಶ್ನಿಸುತ್ತಿದ್ದಾರೆ. ಇಂಥಾ ಜನಸಾಮಾನ್ಯರ ಅಸಹನೆಯಾದರೂ ಪರಮೇಶ್ವರ್ಗೆ ಗೊತ್ತಾಗಬಹುದಾ? ಅದೂ ಗೊತ್ತಿಲ್ಲ!
ಈಗಂತೂ ಪರಪ್ದಪನ ಅಗ್ರಹಾರದ ಪಡಸಾಲೆಯಲ್ಲೇ ಈ ಸರ್ಕಾರದ ಮಾನ ಮರ್ಯಾದೆ ಪಡ್ಚಾ ಆಗಿದೆ. ಸದ್ಯ ಇಂಥಾದ್ದೊಂದು ಅಸ್ತ್ರ ಸಿಕ್ಕಿರೋದರಿಂದ ಅದನ್ನು ಜನಪರವಾಗಿ ಪ್ರಯೋಗಿಸುವ ಕಸುವನ್ನೂ ಕೂಡಾ ವಿರೋಧ ಪಕ್ಷವಾದ ಬಿಜೆಪಿ ಕಳೆದುಕೊಂಡಿದೆ. ಅಷ್ಟಕ್ಕೂ ಈ ಬಿಜೆಪಿ ಮಂದಿ ರಾಷ್ಟ್ರಪ್ರೇಮವನ್ನು ಗುತ್ತಿಗೆ ಪಡೆದವರಂತಾಡುತ್ತಾರೆ. ಇಂಥಾ ದೇಶಭಕ್ತರ ದರ್ಬಾರಿನಲ್ಲಿಯೇ ನಾಸಿರ್ ಎಂಬ ನಾಯಂಡಳ್ಳಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿತ ಭಯೋತ್ಪಾದಕ ರಾಜಾತೀಥ್ಯ ಪಡೆದಿದ್ದ. ಇದು ನೌಟಂಕಿ ರಾಜಕೀಯ ಪಟ್ಟುಗಳಿಗೊಂದು ಕ್ರೂರ ಸಾಕ್ಷಿ. ಈ ಪ್ರಕರಣದಿಂದ ಸರ್ಕಾರದ ಮಾನ ರಾಷ್ಟ್ರ ಮಟ್ಟದಲ್ಲಿ ಹರಾಜಾಗಿರೋದರಿಂದ ಮುಖ್ಯ ಜೈಲಾಧಿಕಾರಿಯಾಗಿದ್ದ ಸುರೇಶನ ತಲೆದಂಡವಾಗೋ ಸಾಧ್ಯತೆಯಿದೆ. ಈಗಿರುವ ವಾತಾವರಣದ ಆಧಾರದಲ್ಲಿ ಹೇಳೋದಾದರೆ, ಸಚಿವ ಸಂಪುಟ ಪುನಾರಚನೆಯ ಪಲ್ಲಟದಲ್ಲಿ ಪರಂ ಗೃಹಸಚಿವಗಿರಿಯೂ ಧೂಳೀಪಟವಾಗಲಿದೆ. ಸಿಎಂ ಸಿದ್ದರಾಮಯ್ಯ ಪರಪ್ಪನ ಅಗ್ರಹಾರ ಹೊಕ್ಕಿರುವ ಖಾಕಿ ಕ್ರಿಮಿಗಳನ್ನು ಒದ್ದು ಹೊರಗಟ್ಟಬೇಕಿದೆ. ಸಮರ್ಥ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಮೂಲಕ ಈ ಜೈಲೊಳಗಿನ ಅಕ್ರಮಗಳಿಗೆ ಬ್ರೇಕ್ ಹಾಕಬೇಕಿದೆ…
