ಪಾಕಿಸ್ತಾನವೀಗ ಅಕ್ಷರಶಃ ಬಯೋತ್ಪಾದನೆಯ ನೆಲೆಯಾಗಿ ಬದಲಾಗಿದೆ. ಯಾವ ನೆಲದಲ್ಲಿ ಮತೀಯ ವಾದ ಉಲ್ಬಣಿಸಿ, ಮೂಲಭೂತವಾದ ವಿಜೃಂಭಿಸುತ್ತದೋ, ಆದೇಶವನ್ನು ಖುದ್ದು ದೇವರೇ ಬಂದರೂ ಕಾಪಾಡಲು ಸಾಧ್ಯವಿಲ್ಲ. ಜನರ ಗಮನವೆಲ್ಲ ಮತೀಯವಾದದತ್ತ ಹರಿದಿರುವಾಗಲೇ ಆಳೋ ಮಂದಿ ಲೂಟಿ ಹೊಡೆದು ತೆಪ್ಪಗಿರುತ್ತಾರೆ. ಪರಿಣಾಮವಾಗಿ ಆರ್ಥಿಕತೆ ಕುಸಿದು ಜನರ ಬದುಕು ಅದಃಪಾತಾಳ ತಲುಪಿಕೊಳ್ಳುತ್ತದೆ. ಈ ಮಾತಿಗೆ ತಾಜಾ ಉದಾಹರಣೆಯಂತಿರುವ ರಾಷ್ಟ್ರ ಪಾಕಿಸ್ತಾನ. ಈ ಕಾರಣದಿಂದಲೇ ಅಲ್ಲಿ ಈವತ್ತಿಗೆ ಬಡತನ ತಾಂಡವವವಾಡುತ್ತಿದೆ. ಅದರ ಬೇಗೆಗೆ ಸಿಕ್ಕ ಮನುಷ್ಯ ರಕ್ಕಸನಾಗುತ್ತಿದ್ದಾನೆ. ಈ ಮಾತಿಗೆ ಸಾಕ್ಷಿಯಂಥಾ ಘಟನೆಯೊಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.
ಇಲ್ಲಿನ ಆಸಾಮಿಯೊಬ್ಬ ಮೈ ತುಂಬಾ ಸಾಲ ಮಾಡಿಕೊಂಡು ಮಗಳನ್ನೇ ಸಾಲ ಕೊಟ್ಟವನಿಗೆ ಮಾರಲು ಮುಂದಾಗಿದ್ದ. ಈ ದಾರುಣಕ್ಕೆ ತಡೆಯಾಗಿ ನಿಂತ ಮಡದಿಯನ್ನೇ ಕೊಂದು ಕೆಡವಿದ್ದಾನೆ. ಇಂಥಾದ್ದೊಂದು ಅಮಾನುಷ ಕೃತ್ಯವೆಸಗಿದಾತ ಜುಲ್ಫೀಕರ್. ಸಂಧ್ ಪ್ರಾಂತ್ಯದಲ್ಲಿ ಹೆಂಡತಿ ಮತ್ತು ಮಕ್ಕಳೊಂದಿಗೆ ಬದುಕುತ್ತಿದ್ದ ಈತ ಮೈ ತುಂಬಾ ಸಾಲ ಮಾಡಿಕೊಂಡಿದ್ದ. ಅದರಲ್ಲಿಯೂ ವ್ಯಕ್ತಿಯೊಬ್ಬನಿಂದ ಒಂದು ಲಕ್ಷ ರೂಪಾಯಿ ಸಾಲ ಇಸಿದುಕೊಂಡಿದ್ದ. ಸಾಲ ವಾಪಾಸು ಕೊಡುವಂತೆ ಒತ್ತಡ ಬರಲಾರಂಭಿಸಿದಾಗ ಮನುಷ್ಯತ್ವವನ್ನೇ ಅಣುಕಿಸುವಂಥಾ ನಿರ್ಧಾರಕ್ಕೆ ಬಂದಿದ್ದ.
ಒಂದು ಲಕ್ಷಗಳಷ್ಟು ಮೊತ್ತವನ್ನು ಮರು ಪಾವತಿ ಮಾಡಲು ಆತನಿಗೆ ಬೇರ್ಯಾವ ದಾರಿಯೂ ಕಾಣಿಸಿರಲಿಲ್ಲ. ಆಗ ಇನ್ನೂ ಜಗತ್ತಿನತ್ತ ಬೆರಗಿನಿಂದ ನೋಡುತ್ತಿದ್ದ ತನ್ನ ಅಪ್ರಾಪ್ತ ಮಗಳನ್ನೇ ಸಾಲ ಕೊಟ್ಟವನಿಗೆ ಮಾರಿಕೊಳ್ಳಲು ತೀರ್ಮಾನಿಸಿದ್ದ. ಈ ವಿಚಾರ ಯಾವ ತಾಯಿಗೇ ಆದರೂ ಆಘಾತವನ್ನುಂಟು ಮಾಡುತ್ತದೆ. ಈ ಕಾರಣದಿಂದಲೇ ಆಕೆ ಪತಿಯ ನಿರ್ಧಾರವನ್ನು ಖುಲ್ಲಂಖುಲ್ಲ ವಿರೋಧಿಸಿದ್ದಾಳೆ. ಈ ಸಂಬಂಧವಾಗಿ ಜಗಳ ನಡೆದಿದೆ. ಇದರಿಂದ ರೊಚ್ಚಿಗೆದ್ದ ಆತ ಮಡದಿಯನ್ನು ಕೊಂದೇ ಹಾಕಿದ್ದಾನೆ.