ಬೆಂಗಳೂರಿನಲ್ಲಿ ಮೈಚಾಚಿಕೊಂಡ ಭೂಗತ ಜಗತ್ತಿನ ರಕ್ತರಂಜಿತ ಕಥನಗಳಲ್ಲಿ ನೆಲಮಂಗಲದ ಕದನಕ್ಕೆ ಬೇರೆಯದ್ದೇ ಕಿಮ್ಮತ್ತಿದೆ. ಈ ಭಾಗದಲ್ಲಿ ಹಬ್ಬಿಕೊಂಡಿದ್ದ ಗ್ಯಾಂಗ್ ವಾರ್, ದಂಧೆ ದೋಖಾಬಾಜಿ ಮತ್ತು ಪ್ರತೀಕಾರದ ಹತ್ಯೆಗಳಿಂದ ನೆಲಮಂಗಲವೆಂಬುದು ಅಕ್ಷರಶಃ ನೆತ್ತರಿಂದ ತೊಯ್ದು ತೊಪ್ಪೆಯಾಗಿತ್ತು. ಈ ಭಾಗದ ಭೂಗತ ಜಗತ್ತಿನ ಬಡಿದಾಟಗಳಲ್ಲಿ ಭಾರೀ ನಟೋರಿಟಿ ಪಡೆದುಕೊಂಡಿದ್ದದ್ದು ಬೆತ್ತನಗೆರೆ ಬ್ರ್ಯಾಂಡಿನ ಭೀಕರ ಬಡಿದಾಟ. ಇಂಥಾ ಗ್ಯಾಂಗುಗಳ ದೆಸೆಯಿಂದಾಗಿ ಕೃಷಿ, ಹೈನುಗಾರಿಕೆಯನ್ನು ನೆಚ್ಚಿಕೊಂಡು ಬದುಕುತ್ತಿದ್ದ ಈ ಚೆಂದದ ಊರ ತುಂಬಾ ರೌಡಿ ಎಲಿಮೆಂಟುಗಳದ್ದೇ ಮೇಲುಗೈ ಎಂಬಂಥಾ ಸ್ಥಿತಿಯೂ ನಿರ್ಮಾಣವಾಗಿತ್ತು. ಕಾಲಚಕ್ರದೊಂದಿಗೆ ಒಂದಷ್ಟು ತಲೆಗಳೂ ಉರುಳಿದ ನಂತರ ನೆಲಮಂಗಲದ ತುಂಬೆಲ್ಲ ಮೆಲ್ಲಗೆ ನೆಮ್ಮದಿ ಹಬ್ಬಿಕೊಂಡಿತ್ತು. ಆದರೀಗ ಸರಿಸುಮಾರು ಹದಿನೆಂಟು ವರ್ಷಗಳ ರಣದ್ವೇಷ ಮತ್ತೆ ಮೈಕೊಡವಿಕೊಂಡಿದೆ; ಕುಖ್ಯಾತ ಪಾತಕಿ ಬೆತ್ತನಗೆರೆ ಶಂಕ್ರನ ಹತ್ಯೆಗೆ ಹೊಂಚು ಹಾಕಿ ಕೂತಿದ್ದ ಹ್ಯಾಡಾಳು ದೇವಿಯ ಮಗನನ ಪಟಾಲಮ್ಮನ್ನು ಸಿಸಿಬಿ ಪೊಲೀಸರು ಹಡೆಮುರಿ ಕಟ್ಟುವ ಮೂಲಕ!
ನಿಗಿನಿಗಿಸುತ್ತಿತ್ತು ದ್ವೇಷದ ಕಿಚ್ಚು

ವಿರೋಧಿ ಗ್ಯಾಂಗುಗಳ ತಲೆಗಳೊಂದಿಗೆ ದ್ವೇಷದ ಕಿಚ್ಚೂ ಕೂಡಾ ಮಣ್ಣಾಗುತ್ತದೆ ಅಂದುಕೊಳ್ಳುವಂತಿಲ್ಲ. ಯಾಕೆಂದರೆ, ಇಂಥಾ ಪ್ರತೀಕಾರದ ಬೆಂಕಿ ಅದ್ಯಾರ ಎದೆಯಲ್ಲಿ ಕೆಂಡಗಟ್ಟಿಕೊಂಡಿರುತ್ತದೋ ಹೇಳಲು ಬರುವುದಿಲ್ಲ. ಇದೀಗ ಬೆತ್ತನಗೆರೆ ಶಂಕ್ರನ ಹತ್ಯೆಗೆ ಸ್ಕೆಚ್ಚು ಹಾಕಿ ಸಿಸಿಬಿ ಪೊಲೀಸರ ಕೈಗೆ ತಗುಲಿಕೊಂಡವರ ಹಿನ್ನೆಲೆ ಕಂಡರೆ ಆ ವಿಚಾರ ಸ್ಪಷ್ಟವಾಗುತ್ತದೆ. ಅತ್ತ ಬೆಮೆಲ್ ಕೃಷ್ಣಪ್ಪ ಸೇರಿದಂತೆ ಒಂದಷ್ಟು ಮಂದಿಯ ಹೆಣ ಉರುಳಿದ ನಂತರ, ಬೆತ್ತನಗೆರೆ ಸೀನ ಪೊಲೀಸ್ ಎನ್ಕೌಂಟರಿಗೆ ಬಲಿಯಾಗಿದ್ದ. ಆತನ ವಿರೋಧಿ ಪಾಳೆಯದ ದಾಯಾದಿ ಬೆತ್ತನಗೆರೆ ಶಂಕ್ರನಿಗೂ ಕೂಡಾ ಖಾಕಿ ಭಯ ನಖಶಿಖಾಂತ ಅಮರಿಕೊಳ್ಳಲಾರಂಭಿಸಿತ್ತು. ಅದಾಗಲೇ ನೆಲಮಂಗಲ ಭಾಗದಲ್ಲಿ ಡಾನ್ ಎಂಬಂತೆ ಮೆರೆದಿದ್ದ ಶಂಕ್ರ ಮೆತ್ತಗೆ ಭೂಗತದಿಂದ ಕಳಚಿಕೊಳ್ಳಲಾರಂಭಿಸಿದ್ದ. ಆತ ಊರುಬಿಟ್ಟು ಹೆಚ್ಡಿ ಕೋಟೆಯತ್ತ ಸರಿದಾದ ನಂತರ ನೆಲಮಂಗಲಕ್ಕೆ ನೆಮ್ಮದಿಯ ವರ ಸಿಕ್ಕಂತಾಗಿತ್ತು.
ಒಂದು ಕಾಲದಲ್ಲಿ ಉತ್ತುಂಗದಲ್ಲಿದ್ದ ನೆಲಮಂಗಲದ ರಿಯಲ್ ಎಸ್ಟೇಟ್ ದಂಧೆ ಕೂಡಾ ಒಂದಷ್ಟು ಸೌಮ್ಯ ಸ್ವರೂಪ ಪಡೆದುಕೊಂಡಿದೆ. ತಾನೇ ಸುಪ್ರೀಂ ಎಂಬಂತೆ ಮೆರೆಯುತ್ತಿದ್ದ ಬೆತ್ತನಗೆರೆ ಸೀನ ಯಾವಾಗ ಪೊಲೀಸರ ಗುಂಡೇಟು ತಿಂದು ಹುಳುವಿನಂತೆ ನರಳಿ ಸತ್ತನೋ, ಆ ಕ್ಷಣದಿಂದಲೇ ನೆಲಮಂಗಲ ಭಾಗದ ಸಮಸ್ತ ಪುಡಿ ರಾಡಿಗಳಿಗೂ ಅಳ್ಳೆ ಅದುರಿತ್ತು. ಬೆತ್ತನಗೆರೆ ಶಂಕ್ರನಂಥಾ ಶಂಕ್ರನೇ ಗಾಯಬ್ ಆದ ಮೇಲಂತೂ ಎಲ್ಲವೂ ಥಂಡಾ ಹೊಡೆದಂತಾಗಿತ್ತು. ಆದರೆ, ಶಂಕ್ರನ ಜಿದ್ದಿಗೆ ಬಲಿಯಾದ ದೇವೇಂದ್ರಪ್ಪ ಅಲಿಯಾಸ್ ಹ್ಯಾಡಾಳು ದೇವಿಯ ಮಗ ಕಿರಣ್ ಎದೆಯಲ್ಲಿ ಇಂಥಾದ್ದೊಂದು ಸೇಡಿನ ಕಿಚ್ಚು ನಿಗಿನಿಗಿಸುತ್ತಿದೆ ಅನ್ನೋ ವಿಚಾರ ಹೊರಜಗತ್ತಿಗೆ ಗೊತ್ತಾಗಲೇ ಇಲ್ಲ. ಖುದ್ದು ಸಿಸಿಬಿ ಪೊಲೀಸರಿಗೆ ಆ ವಿಚಾರದ ಅರಿವಾದದ್ದು ಕಿರಣನ ಪಾಟಲಮ್ಮಿಗೆ ಲಾಳಕಟ್ಟಿದಾಗಲೇ!
ಸದ್ಯದ ಮಟ್ಟಿಗೆ ಬೆಂಗಳೂರು ಭಾಗದಲ್ಲಿ ಭೂಗತ ಜೀವಿಗಳ ಆರ್ಭಟ ಕಡಿಮೆಯಾಗಿದೆ ಎಂಬಂತೆ ಕಾಣಿಸುತ್ತಿರೋದು ಸುಳ್ಳಲ್ಲ. ಆದರೆ, ಕತ್ತಲ ಜಗತ್ತಿನಲ್ಲಿ ದ್ವೇಷದ ಮಿಡಿನಾಗರ ಅದ್ಯಾವ ಘಳಿಗೆಯಲ್ಲಿ, ಎಂಥಾ ಸ್ವರೂಪದಲ್ಲಾದರೂ ಹೆಡೆಯೆತ್ತಬಹುದು. ಈಗಿನ ವಾತಾವರಣದಲ್ಲಿ ಸುಪಾರಿ ಹತ್ಯೆಗಳ ಜಮಾನ ಮಸಾಜ್ ಪಾರ್ಲರ್, ಫೈನಾನ್ಸ್ ಮಾಫಿಯಾವಾಗಿ ರೂಪಾಂತರ ಹೊಂದಿದೆ. ಆಯಾ ಕಾಲಕ್ಕೆ ಮೈಮಸೆದುಕೊಂಡು ಮತ್ತಷ್ಟು ಹರಿತಗೊಳ್ಳುವ ಜಾಯಮಾನ ಭೂಗತ ಜಗತ್ತಿನದ್ದು. ಅಂಥಾ ಬೆಂಗಳೂರು ಭೂಗತದ ಮೇಲೆ ಕಣ್ಣಿಟ್ಟು ಕಾಯುವ ಸಿಸಿಬಿ ಅಧಿಕಾರಿಗಳು ಇತ್ತೀಚೆಗೆ ಮಹತ್ವದ ಮಾಹಿತಿಯೊಂದನ್ನು ಪಡೆದುಕೊಂಡಿದ್ದರು. ಆ ಇಂಟಲಿಜೆನ್ಸ್ ರಿಪೋರ್ಟ್ ಆಧರಿಸಿ ಅಖಾಡಕ್ಕಿಳಿದ ಅಧಿಕಾರಿಗಳ ಕೈಗೆ ತಗುಲಿಕೊಂಡಿದ್ದು ಬೆತ್ತನಗೆರೆ ಶಂಕ್ರನ ಹೆಣ ಕೆಡವಲು ಕಾದು ಕೂತಿದ್ದ ಹ್ಯಾಡಾಳು ದೇವಿ ಮಗ ಕಿರಣನ ಬೆಟಾಲಿಯನ್ನು!
ಹ್ಯಾಡಾಳು ದೇವಿಯ ಕುಡಿ

2007ರಲ್ಲಿ ತನ್ನ ವಿರೋಧಿ ಬೆತ್ತನಗೆರೆ ಸೀನನಿಗೆ ಬೆಂಬಲವಾಗಿದ್ದನೆಂಬ ಸಿಟ್ಟಿನಿಂದ ಹ್ಯಾಡಾಳು ದೇವಿಯನ್ನು ಬರ್ಭರವಾಗಿ ಕೊಂದಿದ್ದವನು ಬೆತ್ತನಗೆರೆ ಶಂಕ್ರ. ಆವತ್ತಿಗೆ ಹ್ಯಾಡಾಳು ದೇವಿ ಹತನಾದ ಪರಿ ಕಂಡು ನೆಲಮಂಗಲದ ಮಂದಿ ಕಂಗಾಲಾಗಿದ್ದರು. ಆಗಿನ್ನೂ ಯೌವನದ ಹೊಸ್ತಿಲಲ್ಲಿದ್ದ ದೇವಿಯ ಮಗ ಕಿರಣ ತನ್ನಪ್ಪನನ್ನು ಕೊಂದ ಶಂಕ್ರನಿಗೊಂದು ಗತಿಗಾಣಿಸುವ ಶಪಥ ಮಾಡಿದ್ದನಾ? ಅಂಥಾದ್ದೊಂದು ಕಿಚ್ಚಿಲ್ಲದೇ ಹೋಗಿದ್ದರೆ ಹದಿನೆಂಟು ವರ್ಷದ ನಂತರ ಕಿರಣ ಇಂಥಾದ್ದೊಂದು ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಅತ್ತ ಬೆತ್ತನಗೆರೆ ಶಂಕ್ರ ನೆಲಮಂಗಲದಿಂದ ಗಾಯಬ್ ಆಗಿದ್ದ. ಒಂದಷ್ಟು ಕಾಲ ನಿಗೂಢವಾಗಿದ್ದವನು ಇತ್ತೀಚಿನ ವರ್ಷಗಳಲ್ಲಿ ಹೆಚ್ ಡಿ ಕೋಟೆಯ ಅಂತರಸಂತೆಯಲ್ಲಿ ನೆಲೆಗೊಂಡು, ಗ್ರಾಮಪಂಚಾಯ್ತಿ ರಾಜಕೀಯದಿಂದ ಮೆಲ್ಲಗೆ ಚಿಗುರಿಕೊಳ್ಳಲಾರಂಭಿಸಿದ್ದ.
ಇನ್ನೇನು ಒಂದಷ್ಟು ವರ್ಷ ಕಳೆದರೆ ರಾಜಕೀಯವಾಗಿ ಶಂಕ್ರ ಬೆಳೆದು ನಿಲ್ಲಬಹುದಾದ ಎಲ್ಲ ಸಾಧ್ಯತೆಗಳಿದ್ದವು. ಆ ನಂತರ ಆತನನ್ನು ಮುಟ್ಟೋದು ಸಲೀಸಲ್ಲ ಎಂಬ ಸತ್ಯದ ಅರಿವಾಗಿಯೇ ಹ್ಯಾಡಾಳು ಕಿರಣ ಬೆತ್ತನಗೆರೆ ಶಂಕ್ರನಿಗೆ ಮುಹೂರ್ತ ಮಡಗಿದಂತಿದೆ. ಈ ಕಿರಣ ಇತ್ತೀಚಿನ ದಿನಗಳಲ್ಲಿ ನೆಲಮಂಗಲ ಭಾಗದ ಕಾಂಗ್ರೆಸ್ ನಾಯಕನಾಗಿ ಗುರುತಿಸಿಕೊಂಡಿದ್ದ. ಒಂದಷ್ಟು ಪ್ರಭಾವ ಬೆಳೆಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸಿದ್ದ. ತನ್ನ ತಂದೆಯನ್ನು ಕೊಂದವನ ಹೆಣ ಕೆಡಹುವುದನ್ನೇ ಬದುಕಿನ ಗುರಿಯಾಗಿಸಿಕೊಂಡಂತಿದ್ದ ಕಿರಣ ಅದಕ್ಕಾಗಿ ತ್ಯಾಮಗೊಂಡ್ಲುವಿನ ರೌಡಿ ಶೀಟರುಗಳಾದ ಶರತ್, ರಾಜೇಶ್, ತಾವರೆಕೆರೆಯ ರೌಡಿಶೀಟರ್ ಕಾಗೆ ಭರತ್ ಮತ್ತು ಆಕಾಶ್, ಅಭಿಲಾಶ್ ಎಂಬವರ ತಂಡ ಕಟ್ಟಿದ್ದ.
ಖುದ್ದು ಕಿರಣ ಈ ತಂಡದೊಂದಿಗೆ ಸೇರಿಕೊಂಡು ಹಲವಾರು ಬಾರಿ ಶಂಕ್ರನ ಮೇಲೆ ಅಟ್ಯಾಕ್ ನಡೆಸುವ ವಿಫಲ ಯತ್ನ ನಡೆಸಿದ್ದ. ಬೆತ್ತನಗೆರೆ ಶಂಕ್ರ ಹೆಚ್ಡಿ ಕೋಟೆಯಲ್ಲಿ ನೆಲೆ ಕಂಡುಕೊಂಡರೂ ಕೂಡಾ, ಭಾರೀ ಸೆಕ್ಯೂರಿಟಿಯೊಂದಿಗೆ ಬೆಂಗಳೂರಿನಲ್ಲಿರುವ ತನ್ನ ಪ್ರಾಪರ್ಟಿ, ವ್ಯವಹಾರಗಳನ್ನು ಸಂಭಾಳಿಸಲು ಆಗಾಗ ಬರುತ್ತಿರುವ ಮಾಹಿತಿಯನ್ನು ಈ ಗ್ಯಾಂಗು ಕಲೆ ಹಾಕಿತ್ತು. ಸುಂಕದಕಟ್ಟೆ, ಮಾಗಡಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಈ ತಂಡ ಶಂಕ್ರನ ಬಲಿಗಾಗಿ ಬೀಟು ಹೊಡೆದಿತ್ತು. ಶಂಕ್ರನಿಗೆ ಸೇರಿದ ಜಾಲಹಳ್ಳಿಯ ಪ್ಲಾಟ್ ಬಳಿಯೂ ಹೊಂಚಿ ಕೂತಿತ್ತು. ಈ ತಂಡದ ಚಲನವಲನಗಳನ್ನು ಗುಪ್ತಚರ ಇಲಾಖೆ ಮನಗಂಡು, ಅದನ್ನು ಸಿಸಿಬಿ ಅಧಿಕಾರಿಗಳಿಗೆ ರವಾನಿಸಿತ್ತು. ಅದರನ್ವಯ ಅಲರ್ಟ್ ಆದ ನುರಿತ ಅಧಿಕಾರಿಗಳು ಕಿರಣನ ಗ್ಯಾಂಗ್ ಅನ್ನು ಬಲೆಗೆ ಕೆಡವಿಕೊಂಡಿದ್ದಾರೆ. ಅಲ್ಲಿಗೆ ಉತ್ತುಂಗದಲ್ಲಿದ್ದ ನೆಲಮಂಗಲ ರಕ್ತಚರಿತ್ರೆಯ ಪಳೆಯುಳಿಕೆಯಂತಿರುವ ಬೆತ್ತನಗೆರೆ ಶಂಕ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ!
ಬೆತ್ತನಗೆರೆಯ ನೆತ್ತರಗಾಥೆ
ನೆಮಂಗಲ, ದೇವನಹಳ್ಳಿ ಸೇರಿಕದಂತೆ ಅನೇಕ ಬೆಂಗಳೂರಿನ ಭಾಗಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಕುದುರಿಕೊಳ್ಳುತ್ತಿದ್ದ ಕಾಲಮಾನವದು. ಇಂಥಾ ಹೊತ್ತಿನಲ್ಲಿ ನೆಲಮಂಗಲವನ್ನು ರಕ್ತಸಿಕ್ತಗೊಳಿಸಿದ ಕುಖ್ಯಾತಿ ಬೆತ್ತನಗೆರೆ ಬ್ರರ್ಸ್ ಅಂತಲೇ ಖ್ಯಾತಿವೆತ್ತಿದ್ದ ಶ್ರೀನಿವಾಸ ಅಲಿಯಾಸ್ ಸೀನ ಮತ್ತು ಶಂಕ್ರನಿಗಲ್ಲದೆ ಮತ್ಯಾರಿಗೆ ಸಲ್ಲಲು ಸಾಧ್ಯ? ಸ್ಥಳೀಯ ರಾಜಕಾರಣದ ದ್ವೇಷದ ಕುಲುಮೆಯಲ್ಲಿ ಒಂದಿಡೀ ನೆಲಮಂಗಲ ಕರಟುವಂತೆ ಮಾಡಿದ ಬಾಬತ್ತೂ ಅವರಿಬ್ಬರಿಗೇ ಸಲ್ಲುತ್ತೆ. ಯಾಕೆಂದರೆ, ೨೦೦೫ರಲ್ಲಿ ಹಾಲಿನಡೈರಿ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ ಸೇಡಿಗೆ ಬಾಳೆಕಾಯಿ ಮಂಡಿ ಬಸವಯ್ಯನನ್ನು ಬೆತ್ತನಗೆರೆ ಬ್ರದರ್ಸ್ ಕೊಂದುಜ ಕೆಡವಿದ್ದರು. ಅದು ನೆಲಮಂಗಲದ ನೆತ್ತರಗಾಥೆಯ ಪ್ರಥಮ ಅಧ್ಯಾಯ. ಆ ಕೇಸಿನಲ್ಲಿ ಜೈಲು ಸೇರಿದ್ದ ಶಂಕ್ರ ನಂತರ ೨೦೦೬ರಲ್ಲಿ ಬಸವಯ್ಯನ ಕೊಲೆ ಕೇಸಿನ ಸಾಕ್ಷಿಗಳಾಗಿದ್ದ ವಕೀಲ ದೇವರಾಜ್ ಮತ್ತು ಕೃಷ್ಣಮೂರ್ತಿಯನ್ನು ಬೆತ್ತನಗೆರೆ ಸೀನನ ಜೊತೆಗೂಡಿ ಕೊಂದಿದ್ದ.
ಬಾಳೆಕಾಯಿಮಂಡಿ ಬಸವಯ್ಯನ ಕೊಲೆ ಕೇಸಿನಲ್ಲಿ ೨೦೦೮ರಲ್ಲಿ ಬೆತ್ತನಗೆರೆ ಶಂಕ್ರ ಹೊರ ಬಂದನಾದರೂ, ಸೀನ ಜೈಲೊಳಗೇ ಇದ್ದ. ಈ ಹಂತದವರೆಗೂ ಒಟ್ಟೊಟ್ಟಾಗಿ ರಕ್ತ ಹರಿಸಿದ್ದ ಈ ಸೋದರ ಸಂಬಂಧಿಗಳ ನಡುವೆ ಸಣ್ಣಗೆ ಮನಸ್ತಾಪಗಳು ಶುರುವಾಗಿತ್ತವು. ಶಂಕ್ರ ಹೊರ ಬರುತ್ತಲೇ ತಮ್ಮಿಂದ ಹತನಾಗಿದ್ದ ಲಾಯರ್ ದೇವರಾಜ್ ಕೇಸಲ್ಲಿ ಆತನ ತಂದೆ ಬೈಲಪ್ಪ ಸಾಕ್ಷಿ ಹೇಳೋದು ಖಚಿತವಾಗಿತ್ತು. ಅದನ್ನು ತಪ್ಪಿಸಲು ಸೀನ ಜೈಲೊಳಗಿದ್ದುಕೊಂಡೇ ಹುಡುಗರನ್ನು ಸಜ್ಜುಗೊಳಿಸಿ ಬೈಲಪ್ಪನ ಹೆಣ ಉರುಳಿಸಿದ್ದ. ಅದೇಕೋ ಬೈಲಪ್ಪನ ಕೊಲೆಗೆ ಶಂಕ್ರನ ಸಹಮತವಿರಲಿಲ್ಲ. ತನ್ನ ಮಾತು ಮೀರಿ ಕೊಲೆ ಮಾಡಿದ ಸೀನನ ವಿರುದ್ಧ ಶಂಕ್ರ ಕೊತಗುಡಲಾರಂಭಿಸಿದ್ದ. ಈ ಕೊಲೆ ಕೇಸಿನ ಮೂಲಕ ಈ ಸೋದರ ಸಂಬಂಧಿಗಳ ನಡುವೆ ರಣಕದನ ಶುರುವಾಗಿ ಬಿಟ್ಟಿತ್ತು.
ದಾಯಾದಿಗಳ ಕದನ ಶುರು

ಈ ಬೈಲಪ್ಪನ ಕೊಲೆ ಕೇಸಿನಿಂದ ಬೆತ್ತನಗೆರೆ ಶಂಕ್ರ ಮತ್ತು ಸೀನನ ನಡುವೆ ಅದೇಂಥಾ ದುಷ್ಮನಿ ಶುರುವಾಗಿತ್ತೆಂದರೆ, ಅದರ ದೆಸೆಯಿಂದ ಸೂತ್ರ ಸಂಬಂಧವಿಲ್ಲದವರೂ ಸಾಯುವಂತಾಗಿತ್ತು. ೨೦೦೯ರಲ್ಲಿ ಅಂಥಾದ್ದೊಂದು ಅಮಾನುಷ ಬಲಿ ನಡೆದಿತ್ತು. ಅದೊಂದು ದಿನ ಪರಪ್ಪನ ಅಗ್ರಹಾರ ಜೈಲಿನ ರಸ್ತೆಯಲ್ಲಿ ಬೆತ್ತನಗೆರೆ ಶಂಕ್ರನಿಗೆ ಎಂಟ್ರಿ ಹಾಕಿ ಹೋಗುವ ಸಂದರ್ಭದಲ್ಲಿ ರೋಹಿತ್ ಗೌಡ ಎಂಬಾತನನ್ನು ಬೆತ್ತನಗೆರೆ ಸೀನ ಕೊಂದು ಬಿಟ್ಟಿದ್ದ. ಅಷ್ಟಕ್ಕೂ ಈ ರೋಹಿತ್ ರೌಡಿಯಾಗಿರಲಿಲ್ಲ. ಯಾವ ಅಪರಾಧದ ಹಿನ್ನೆಲೆಯೂ ಇರಲಿಲ್ಲ. ಆತ ಶಂಕ್ರನ ಜೊತೆ ಕಾಣಿಸಿಕೊಂಡಿದ್ದ, ಆತನನ್ನು ಕೊಂದರೆ ಶಂಕ್ರ ಕನಲುತ್ತಾನೆಂಬ ಕಾರಣಕ್ಕೆ ಸೀನ ಈ ಅನಾಹುತ ಸೃಷ್ಟಿಸಿದ್ದ. ಈ ಕೊಲೆಯ ಮೂಲಕ ಶಂಕ್ರ ಮತ್ತು ಸೀನನ ದುಷ್ಮನಿ ಒಬ್ಬರನ್ನೊಬ್ಬರು ಮುಗಿಸಲು ಹೊಂಚು ಹಾಕುವ ಮಟ್ಟಕ್ಕೆ ಬೆಳೆದು ನಿಂತಿತ್ತು.
ರಿಯಲ್ ಎಸ್ಟೇಟ್, ದರೋಡೆ ದಂಧೆ ಸೇರಿದಂತೆ ಸೀನ ಮತ್ತು ಶಂಕ್ರ ಹೆಜ್ಜೆ ಹೆಜ್ಜೆಗೂ ಬಡಿದಾಡಲಾರಂಭಿಸಿದ್ದರು.2011ರಲ್ಲಿ ಮೈಸೂರು ಜೈಲಿನಲ್ಲಿ ಕೇಳಿದ ಗುಂಡಿನ ಮೊರೆತ ಅವರಿಬ್ಬರ ಕಾಳಗದ ತೀವ್ರತೆಯನ್ನು ಹೊರಜಗತ್ತಿನತ್ತ ದಾಟಿಸಿತ್ತು. ಬೆತ್ತನಗೆರೆ ಸೀನನನ್ನು ಜೈಲೊಳಗೇ ಹೊಸಕುವ ಉದ್ದೇಶದಿಂದ ಶಂಕ್ರ ಗುಂಡಿನ ಮಳೆಗರೆದಿದ್ದ. ಅದರಲ್ಲೊಂದು ಗುಂಡು ಸೀನನ ಭುಜಕ್ಕೆ ಹೊಕ್ಕಿತ್ತಾದರೂ ಹೇಗೋ ಬಚಾವಾಗಿದ್ದ. ಇದೂ ಸೇರಿದಂತೆ ಅನೇಕ ಬಾರಿ ಶಂಕ್ರ ಸೀನನ ಕಥೆ ಮುಗಿಸಲು ಶತಪ್ರಯತ್ನ ನಡೆಸಿದ್ದ. ಆದರೆ, ಬೆತ್ತನಗೆರೆ ಸೀನ ಪ್ರತೀ ಸಲವೂ ಕೂದಲೆಳೆ ಅಂತರದಿಂದ ಪಾರಾಗುತ್ತಲೇ ಬಂದಿದ್ದ. ಶಂಕ್ರನನ್ನು ಹೀಗೇ ಬಿಟ್ಟರೆ ತನ್ನ ಕಥೆ ಮುಗಿದಂತೆಯೇ ಎಂಬ ವಿಚಾರ ಯಾವಾಗ ಖಾತರಿಯಾಯಿತೋ, ಆಗ ಬೆತ್ತನಗೆರೆ ಸೀನ ಸರಿಕಟ್ಟಾಗಿಯೇ ಅಖಾಡಕ್ಕಿಳಿದಿದ್ದ.
ಬಲಿಯಾದ ಹ್ಯಾಡಾಳು ದೇವಿ
ಆ ಕಾಲದಲ್ಲಿ ಶಂಕ್ರ ಬಿಜಾಪುರ ಜೈಲಿನಲ್ಲಿದ್ದ. ಆ ಹೊತ್ತಿಗೆಲ್ಲ ದುಡ್ಡು ಕಾಸಿನಲ್ಲಿಯೂ ಬಲಾಢ್ಯನಾಗಿದ್ದ ಸೀನ, ಶಂಕ್ರನನ್ನು ಮುಗಿಸಿಯೇ ತೀರಬೇಕೆಂದು ಪಣ ತೊಟ್ಟಿದ್ದ. ಆಗ ಡಬಲ್ ಮರ್ಡರ್ ಕೇಸಿನ ನಟೋರಿಯಸ್ ಆಸಾಮಿಗಳು ರಾಮನಗರ ಜೈಲು ಪಾಲಾಗಿದ್ದರು. ಅವರನ್ನು ಬಿಜಾಪುರ ಜೈಲಿಗೆ ಕಮಾನೆತ್ತಿಸುವ ಮೂಲಕ ಜೈಲೊಳಗೇ ಬೆತ್ತನಗೆರೆ ಶಂಕ್ರನ ಕಥೆ ಮುಗಿಸಲು ಸೀನ ಸಜ್ಜಾಗಿದ್ದ. ಸಾವು ತನ್ನ ಸನಿಹದಲ್ಲೇ ಇದೆ ಎಂಬುದನ್ನು ಅರಿತುಕೊಂಡ ಚಾಲಾಕಿ ಶಂಕ್ರ ಅದು ಹೇಗೋ ಬಚಾವಾಗಿದ್ದ. ಸೀನನ ಈ ಸ್ಕೆಚ್ಚಿಗೆ ಪ್ರತಿಕಾರವೆಂಬಂತೆ ವಕೀಲ ರವಿಯನ್ನು ಕೊಂದಿದ್ದ. ನಂತರ ಸೀನನಿಗೆ ನೆರಳಾಗಿ ನಿಂತ ಒಬ್ಬೊಬ್ಬರನ್ನೇ ನೆಲಕ್ಕೊರಗಿಸಲು ಮುಂದಾಗಿದ್ದ. ಹಾಗೆ ಕೆಂಡದಂತಾಗಿದ್ದ ಶಂಕ್ರ ನಡೆಸಿದ ಸೀನನ ವಿರುದ್ಧದ ಕಾರ್ಯಾಚರಣೆಗೆ ಬಲಿಯಾದ ದೊಡ್ಡ ಮಿಕ ದೇವೇಂದ್ರಪ್ಪ ಅಲಿಯಾಸ್ ಹ್ಯಾಡಾಳು ದೇವಿ!
ಈ ದೇವೇಂದ್ರಪ್ಪ ರಾಜಕೀಯದಲ್ಲಿ ಸಕ್ರಿಯನಾಗಿದ್ದುಕೊಂಡು, ಬೆತ್ತನಗೆರೆ ಸೀನನಿಗೆ ನೆರಳಾಗಿದ್ದ. ಖುದ್ದು ಸೀನನೇ ಹ್ಯಾಡಾಳು ದೇವಿಯನ್ನು ತನ್ನ ಗಾಡ್ಫಾದರ್ ಎಂಬಂತೆ ಬಿಂಬಿಸಿಕೊಂಡಿದ್ದ. ಹೀಗೆ ನೆರಳಾಗಿದ್ದ ದೇವೇಂದ್ರಪ್ಪ ಸೀನನ ಸ್ವಂತ ಅಕ್ಕನ ಗಂಡ. ಈ ದೇವೇಂದ್ರಪ್ಪನಿಗೂ ಶಂಕ್ರನಿಗೂ ಯಾವ ತಕರಾರೂ ಇರಲಿಲ್ಲ. ಆದರೆ, ಸೀನನನ್ನು ಮಣಿಸಬೇಕೆಂದ ಏಕೈಕ ಉದ್ದೇಶದಿಂದ ಬೆತ್ತನಗೆರೆ ಶಂಕ್ರ ಅತ್ಯಂತ ಬರ್ಬರವಾಗಿ ಹ್ಯಾಡಾಳು ದೇವಿಯ ಹೆಣ ಕೆಡವಿದ್ದ. ಒಂದು ಕಾಲದಲ್ಲಿ ಜೋಡೆತ್ತುಗಳಂತೆ ಒಟ್ಟಿಗಿದ್ದ ಬೆತ್ತನಗೆರೆ ಶಂಕ್ರ ಮತ್ತು ಸೀನ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು. ಇಂಥಾ ದಾಯಾದಿಗಳ ಕಲಹದಿಂದ ನೆಲಮಂಗಲಕ್ಕೆ ರಕ್ತಸಿಂಚನವಾಗಿತ್ತು. ಪರಸ್ಪರ ಜಿದ್ದಿನಿಂದ ಒಂದಷ್ಟು ಮರ್ಡರುಗಳಾಗಿದ್ದವು. ಎರಡೂ ಗ್ಯಾಂಗುಗಳ ನಡುವಿನ ಬಡಿದಾಟವಂತೂ ಮಾಮೂಲೆಂಬಂತಾಗಿತ್ತು. ಈ ಹೊತ್ತಿನಲ್ಲಿ ರಾಜಕೀಯದ ಮಂದಿ, ಬಲಾಢ್ಯರು ಶಂಕ್ರ ಮತ್ತು ಸೀನನ ದುಶ್ಮನಿಯನ್ನು ಸ್ವಂತ ಲಾಭಕ್ಕೆ ಬಳಸಿಕೊಳ್ಳಲಾರಂಭಿಸಿದ್ದರು. ಈ ಹೊತ್ತಿನಲ್ಲಿ ಇವರಿಬ್ಬರ ಕುಟುಂಬಸ್ಥರೇ ಬುದ್ಧಿ ಹೇಳಿ ಅಣ್ಣತಮ್ಮಂದಿರನ್ನು ಒಟ್ಟುಗೂಡಿಸಿದ್ದರು.
ಬೆಮೆಲ್ ಕೃಷ್ಣಪ್ಪನ ಅಂತ್ಯ
ಹೀಗೆ ವರ್ಷಗಟ್ಟಲೆ ವಿರೋಧಿಗಳಾಗಿ ಬಡಿದಾಡಿದ ಬೆತ್ತನಗೆರೆ ಸೀನ ಮತ್ತು ಶಂಕ್ರ ಮತ್ತೆ ಒಂದಾಗಿದ್ದರಿಂದ ನೆಲಮಂಗಲದ ನೆತ್ತರಗಾಥೆಯ ಅನಾಹುತಕಾರಿ ಅಧ್ಯಾಯವೊಂದರ ಪುಟ ತೆರೆದಂತಾಗಿತ್ತು. ಹೀಗೆ ಒಂದಾದ ಈ ನಟೋರಿಯಸ್ ಬ್ರದರ್ಸ್ ಚಿತ್ತ ಹೊರಳಿಕೊಂಡಿದ್ದು ಅದಾಗಲೇ ಜೆಡಿಎಸ್ ನಾಯಕನಾಗಿ, ನೆಲಮಂಗಲದ ರಾಜಕಾರಣದಲ್ಲಿ ಬೆಳೆದು ನಿಂತಿದ್ದ ಬೆಮೆಲ್ ಕೃಷ್ಣಪ್ಪನ ಮೇಲೆ. ೨೦೧೨ರಲ್ಲಿ ಬೆಮೆಲ್ ಕೃಷ್ಣಪ್ಪನ ಹತ್ಯೆಗೆ ಬೆತ್ತನಗೆರೆ ಶಂಕ್ರ ಮತ್ತು ಸೀನ ಸ್ಕೆಚ್ಚು ತಯಾರಿಸಿದ್ದರು. ಅದು ನಿಜಕ್ಕೂ ಎಲ್ಲ ಸಿನಿಮಾಗಳನ್ನೂ ನಿವಾಳಿಸಿ ಎಸೆಯುವಂತಿತ್ತು. ತಮ್ಮ ಸುಳಿವು ಸಿಗದಂತೆ ಕೃಷ್ಣಪ್ಪನನ್ನು ಮುಗಿಸಬೇಕೆಂಬುದು ಆಸ್ಕೆಚ್ಚಿನ ಸಾರಾಂಶವಾಗಿತ್ತು. ಈ ಸಂಬಂಧವಾಗಿ ಒಂದು ಪಾರ್ಟಿ ಆಯೋಜಿಸಿ, ಅದಕ್ಕೆ ನೂರಾರು ಹುಡುಗರನ್ನು ಸೇರಿಸಿ, ಅದೇ ಗುಂಪಿನೊಂದಿಗೆ ಬಿನ್ನಮಂಗಲ ಸಮೀಪ ಬೆಮೆಲ್ ಕೃಷ್ಣಪ್ಪನ ಕಾರನ್ನು ಅಡ್ಡಗಟ್ಟಲಾಗಿತ್ತು.
ಈ ಹಂತದಲ್ಲಿ ಬೆಮೆಲ್ ಕೃಷ್ಣಪ್ಪನ ಅಂಗರಕ್ಷಕ ಗುಂಡು ಹಾರಿಸಿದ್ದೇ ಅದು ಬೆತ್ತನಗೆರೆ ಶಂಕ್ರನೊಂದಿಗಿದ್ದವನನ್ನು ಬಲಿ ಹಾಕಿತ್ತು. ಹಾಗಾದೇಟಿಗೆ ಶಂಕ್ರ ಅದೆಂಥಾ ರೌದ್ರಾವತಾರ ತಾಳಿದ್ದನೆಂದರೆ, ಬೆಮೆಲ್ ಕೂತಿದ್ದ ಕಾರಿಗೆ ಬಾಂಬೆಸೆದಿದ್ದ. ತಕ್ಷಣ ಕಾರಿಗೆ ಮುತ್ತಿಕೊಂಡಿದ್ದ ಸೀನನ ಹುಡುಗರು ಕೃಷ್ಣಪ್ಪನನ್ನು ಚಿತ್ರಹಿಂಸೆ ಕೊಟ್ಟು ಕೊಂದಿದ್ದರು. ಈ ಕೊಲೆ ರಾಜ್ಯಾದ್ಯಂತ ಸದ್ದು ಮಾಡಿತ್ತು. ಅದರಲ್ಲೂ ವಿಶೇಷವಾಗಿ ತನ್ನ ಪಕ್ಷದ ನಾಯಕನನ್ನು ಕೊಂದ ಬೆತ್ತನಗೆರೆ ಸೀನನ ಪಟಾಲಮ್ಮಿನ ವಿರುದ್ಧ ಕುಮಾರಸ್ವಾಮಿ ಬಳಗವೂ ಕುದ್ದು ಹೋಗಿತ್ತು. ಕಡೆಗೂ ಕೃಷ್ಣಪ್ಪ ಕೊಲೆಯಾದ ವರ್ಷವೇ ಸೀನನನ್ನು ಎನ್ಕೌಂಟರ್ ಮೂಲಕ ಖಾಕಿ ಪಡೆ ಮುಗಿಸಿತ್ತು. ಈ ಎನ್ಕೌಟರ್ ಸಂದರ್ಭದಲ್ಲಿ ಬಂಡೆ ಮಂಜ ಮತ್ತು ಶಂಕ್ರ ಬಚಾವಾಗಿದ್ದರು. ಓರ್ವ ನಟೋರಿಯಸ್ ರೌಡಿ ಸತ್ತ ಬಗ್ಗೆ ಈ ಸಮಾಜದಲ್ಲಿ ಸಮಾಧಾನ ಮೂಡಿಕೊಂಡರೂ, ಅದೊಂದು ರಾಜಕೀಯ ಪ್ರೇರಿತ ನಕಲಿ ಎನ್ಕೌಂಟರ್ ಎಂಬ ಆರೋಪ ಆ ದಿನಗಳಲ್ಲಿ ಬಲವಾಗಿ ಕೇಳಿ ಬಂದಿತ್ತು.
ಹೀಗೆ ತನ್ನ ಸಹೋದರನನ್ನು ಕಳೆದುಕೊಂಡಿದ್ದ ಬೆತ್ತನಗೆರೆ ಶಂಕ್ರ ಆ ಬಳಿಕ ಬೆಂಗಳೂರು ರಿಯಲ್ ಎಸ್ಟೇಟ್ ಮಾಫಿಯಾದ ಅಧಿಪತಿಯಾಗಲು ಹವಣಿಸಿದ್ದ. ಆದರೆ, ಜೀವ ಭಯ ಎಂಬುದು ಆತನನ್ನು ಹೆಜ್ಜೆ ಹೆಜ್ಜೆಗೂ ಕಾಡುತ್ತಿತ್ತು. ಬೆಮೆಲ್ ಕೃಷ್ಣಪ್ಪನ ಹತ್ಯೆ ಕೇಸೂ ಸೇರಿದಂತೆ, ಮಾಡಿದ ಹಡಬೆ ಕೃತ್ಯಗಳೆಲ್ಲ ಯಾವತ್ತಿದ್ದರೂ ತನ್ನನ್ನು ಬಲಿ ಹಾಕುತ್ತದೆಂಬ ಸತ್ಯವನ್ನು ಚಾಲಾಕಿ ಶಂಕ್ರ ಅರಿತುಕೊಂಡಿದ್ದ. ತಾನು ತುರ್ತಾಗಿ ರಾಜಕೀಯ ಬಲ ಪಡೆಯದೇ ಹೋದರೆ, ಪಕ್ಷವೊಂದರ ನೆರಳಿಗೆ ಸರಿಯದಿದ್ದರೆ ಜೀವಕ್ಕೆ ಸಂಚಕಾರ ಖಾಯಂ ಎಂಬುದು ಶಂಕ್ರನಿಗೆ ಖಾತರಿಯಾಗಿತ್ತು. ಆ ಹೊತ್ತಿಗೆಲ್ಲ ನೆಲಮಂಗಲ ಸೇರಿದಂತೆ ಬೆಂಗಳೂರು ತುಂಬೆಲ್ಲ ಹತ್ತಾರು ಕೇಸುಗಳು ಶಂಕ್ರನ ಅಂಡಿಗೆ ಹೆಟ್ಟಿಕೊಂಡಿದ್ದವು. ಕಣ್ಣೆದುರೇ ಸೀನನ ದೇಹ ಸೀಳಿದ ಪೊಲೀಸರ್ ಬುಲೆಟ್ಟಿನ ಪವರ್ ನೆನೆಸಿಕೊಂಡ ಶಂಕ್ರನಿಗೆ ತನಗೂ ಅದೇ ಗತಿಯಾಗುತ್ತೆ ಎಂಬಂಥಾ ಭಯ ಕಾಡಿತ್ತಾ? ಅದರ ಫಲವಾಗಿಯೇ ಆತ ಆರ್ ಅಶೋಕ್ ಗೃಹ ಸಚಿವನಾಗಿದ್ದ ಕಾಲದಲ್ಲಿ ಬೆಂಗಳೂರು ಬಿಟ್ಟು ಮೈಸೂರು ಭಾಗದತ್ತ ಕಾಲ್ಕಿತ್ತಿದ್ದ!
ಆಲಂಗಿಸಿಕೊಂಡಿತ್ತು ಸಿಮ್ಮ
ಹಾಗೆ ಹೆಚ್.ಡಿ ಕೋಟೆಯ ಅಂತರಸಂತೆಯಲ್ಲೊಂದು ಮನೆ ಮಾಡಿ ಅಲ್ಲಿಯೇ ನೆಲೆ ನಿಂತಿದ್ದ. ಸುಖಾಸುಮ್ಮನೆ ಯಾವತ್ತೂ ಬೆಂಗಳೂರಿನತ್ತ ತಲೆ ಹಾಕುತ್ತಿರಲಿಲ್ಲ. ಐಟಿ ಸಿಟಿಯಲ್ಲಿರುವ ತನ್ನ ಆಸ್ತಿಪಾಸ್ತಿಗಳನ್ನು ಆಗಬಾಗ ಬಂದು ನೋಡಿಕೊಳ್ಳುತ್ತಿದ್ದ ಶಂಕ್ರ, ತನ್ನ ಸುತ್ತ ಬಿಗಿ ಬಂದೋಬಸ್ತಿರುವಂತೆ ನೋಡಿಕೊಂಡಿದ್ದ. ಇಂಥವನು ರಾಜಕೀಯ ನೆಲೆಗಾಗಿ ಅಂಡಲೆಯುತ್ತಿರುವಾಗಲೇ, ಈಗ ಅಂಡುಸುಟ್ಟ ಬೆಕ್ಕಿನಂತಾಗಿರುವ ಪ್ರತಾಪ್ ಸಿಂಹ ಬಿಜೆಪಿಯೊಳಗೆ ಬರಮಾಡಿಕೊಂಡಿದ್ದ. ನಂತರ ಮೆತ್ತಗೆ ಗ್ರಾಮ ಪಂಚಾಯ್ತಿ ಮಟ್ಟದಿಂದ ರಾಜಕೀಯ ಶುರುವಿಟ್ಟುಕೊಂಡಿದ್ದ ಬೆತ್ತನಗೆರೆ ಶಂಕ್ರ ನಿಧಾನಕ್ಕೆ ಯಡಿಯೂರಪ್ಪನ ಪಟಾಲಮ್ಮು ಸೇರಿಕೊಂಡಿದ್ದ. ವಿಜಯೇಂದ್ರನ ಆಸುಪಾಸಲ್ಲಿ ಠಳಾಯಿಸಲು ಶುರುವಿಟ್ಟ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಹೆಚ್ಡಿ ಕೋಟೆ ವಿಧಾನಸಭಾ ಕ್ಷೇತ್ರದತ್ತ ಟಿಕೆಟಿಗಾಗಿ ಪ್ರಯತ್ನಿಸಿ ವಿಫಲನಾಗಿದ್ದ.
ಹೀಗೆ ರಾಜಕೀಯವಾಗಿ ನೆಲೆ ಕಂಡುಕೊಳ್ಳುವ ಪ್ರಯತ್ನದ ನಡುವಲ್ಲಿಯೇ ಬೆಂಗಳೂರು ಭಾಗದ ರಿಯಲ್ ಎಸ್ಟೇಟ್ ಮೇಲೆ ಅಧಿಪತ್ಯ ಸಾಧಿಸಲು ಶಂಕ್ರ ಪ್ರಯತ್ನಿಸುತ್ತಿದ್ದ. ಇದೆಲ್ಲವನ್ನೂ ಕೂಡಾ ಅತ್ಯಂತ ಸೂಕ್ಷಮವಾಗಿ ಗಮನಿಸುತ್ತಿದ್ದವನು ಹ್ಯಾಡಾಳು ದೇವಿಯ ಕುಡಿ ಕಿರಣ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಂಕ್ರ ಬಿಜೆಪಿಯಿಂದ ಟಿಕೆಟು ಪಡೆದುಕೊಳ್ಳೋ ಸಾಧ್ಯತೆಗಳೂ ಕಿರಣನ ಗಮನಕ್ಕೆ ಬಂದಿತ್ತು. ಈ ಹಂತದಲ್ಲಿ ಶಂಕ್ರನ ಕಥೆ ಮುಗಿಸದಿದ್ದರೆ, ಇನ್ನೆರಡುಮೂರು ವರ್ಷ ಕಳೆದ ಮೇಲೆ ಅವನನ್ನು ಮುಟ್ಟಲೂ ಸಾಧ್ಯವಾಗೋದಿಲ್ಲ ಎಂಬ ವಿಚಾರವೂ ಕಿರಣನಿಗೆ ಖಾತರಿಯಾಗಿತ್ತು. ಈ ತರಾತುರಿಯಲ್ಲೇ ಟೀಮೊಂದನ್ನು ರೆಡಿ ಮಾಡಿ, ಜಮೀನೊಂದನ್ನು ಮಾರಿದ ಕಾಸಲ್ಲಿ ಶಂಕ್ರನ ಹತ್ಯೆಗೆ ತಯಾರಾಗಿದ್ದ. ಇದಕ್ಕಾಗಿ ವರ್ಷಗಟ್ಟಲೆ ತಯಾರಿಯನ್ನೂ ಮಾಡಿಕೊಂಡಿದ್ದ. ಕಡೆಗೂ ಸಿಸಿಬಿ ಪೊಲೀಸರ ಕಾರ್ಯಕ್ಷಮತೆಯಿಂದ ಶಂಕ್ರನ ಕೊಲೆ ತಪ್ಪಿದೆ. ಆದರೆ, ಸದ್ಯದ ವಾತಾವರಣದಲ್ಲಿ ಬೆತ್ತನಗೆರೆಯ ನೆತ್ತರಗಾಥೆ ಮತ್ತೆ ಕಣ್ತೆರೆಯೋ ಕಂಟಕದಿಂದ ನೆಲಮಂಗಲ ಪಾರಾಗೋದು ಕಷ್ಟವಿರುವಂತೆ ಕಾಣಿಸುತ್ತಿದೆ!