ಚೆಂದಗಿರುವ ಸಿನಿಮಾ ನಟಿಯರ ಬಗ್ಗೆ ಪಡ್ಡೆ ಹೈಕಳಲ್ಲಿ ಆಕರ್ಷಣೆಯ ಛಳುಕು ಮೂಡಿಕೊಳ್ಳೋದು ವಿಶೇಷವೇನಲ್ಲ. ಕೆಲ ಮಂದಿಯಂತೂ ಗುಪ್ತವಾಗಿ ಅಂಥಾ ನಟಿಯರೊಂದಿಗೆ ಲವ್ವಿನಲ್ಲಿ ಬಿದ್ದು, ಆ ಮಧುರವಾದ ಯಾತನೆಗಳನ್ನು ಒಳಗೊಳಗೇ ಸಂಭ್ರಮಿಸುತ್ತಾರೆ. ಹೀಗೆ ಸೆಲೆಬ್ರಿಟಿಗಳೊಂದಿಗೆ ಲವ್ವಲ್ಲಿ ಬೀಳೋದೊಂದು ಸಿಂಡ್ರೋಮ್ ಅನ್ನುತ್ತೆ ಮನಃಶಾಸ್ತ್ರ. ಆದರೆ, ಯಾವ ನಟಿಯೇ ಆದರೂ ಆರಂಭ ಕಾಲದ ಇಂಥಾ ಆಕರ್ಷಣೆಗಳನ್ನು ಬಹು ಕಾಲದವರೆಗೂ ಕಾಪಿಟ್ಟುಕೊಳ್ಳುವುದು, ಹೊಸಾ ಜನರೇಷನ್ನನ್ನೂ ಕೂಡಾ ಮರುಳು ಮಾಡೋದು ಕಷ್ಟದ ಕೆಲಸ. ಕೆಲವೇ ಕೆಲ ನಟಿಯರು ಮಾತ್ರವೇ ಭಾರತೀಯ ಚಿತ್ರರಂಗದಲ್ಲಿ ಆ ನಿಟ್ಟಿನಲ್ಲಿ ಯಶ ಕಂಡಿದ್ದಾರೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವಾಕೆ ಮಿಲ್ಕಿ ಬ್ಯೂಟಿ ತಮನ್ನಾ!
ಹೀಗೆ ತಲೆಮಾರುಗಳಾಚೆಗೂ ತನ್ನ ಟ್ಯಾಲೆಂಟು, ಸ್ನಿಗ್ಧ ಸೌಂದರ್ಯದ ಮೂಲಕ ಕೋಟ್ಯಂತರ ಹೃದಯಗಳನ್ನು ಆವರಿಸಿಕೊಂಡಿದ್ದವಳು ತಮನ್ನಾ. ಹೀಗೆ ಹುಚ್ಚೆದ್ದು ಆಕೆಯ ಮೇಲೆ ಮೋಹಗೊಂಡಿದ್ದವರೆಲ್ಲರ ಹೃದಯ ಛಿದ್ರಗೊಳ್ಳುವಂಥಾ ಸುದ್ದಿಯೊಂದು ತಿಂಗಳಿಂದೀಚೆಗೆ ಹರಿದಾಡುತ್ತಿದೆ. ಬಾಲಿವುಡ್ಡಿನ ಖ್ಯಾತ ನಟ ವಿಜಯ್ ವರ್ಮಾ ಜೊತೆ ತಮನ್ನಾ ಭಾಟಿಯಾ ಲವ್ ಅಫೇರ್ ಹೊಂದಿದ್ದಾಳೆಂಬುದು ಅದರ ಸಾರಾಂಶ. ಇದಕ್ಕೆ ಸರಿಯಾಗಿ ಕೆಲ ಪಾರ್ಟಿಗಳಲ್ಲಿ ಆಕೆ ವರ್ಮಾ ಜೊತೆ ಕ್ಲೋಸ್ ಆಗಿರುವ ಫೋಟೋಗಳೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದನ್ನು ಕಂಡು ಪಡ್ಡೆಗಳೆಲ್ಲ ಜನ್ಮಾಂತರಗಳ ಕ್ರಶ್ ಒಂದು ಏಕಾಏಕಿ ಕಳಚಿಕೊಂಡಂಥಾ ವಿಷಣ್ಣ ಭಾವದಿಂದ ನರಳುತ್ತಿದ್ದಾರೆ!
ಆದರೆ, ಇಂಥವೆಲ್ಲ ತನ್ನ ಸುತ್ತಲೇ ಘಟಿಸುತ್ತಿದ್ದರೂ ಮಿಲ್ಕಿ ಬ್ಯೂಟಿ ಮಾತ್ರ ಆ ಬಗ್ಗೆ ಮಾತಾಡಿರಲಿಲ್ಲ. ಇದೀಗ ಕಡೆಗೂ ಸಂದರ್ಶನವೊಂದರಲ್ಲಿ ಆ ಬಗ್ಗೆ ಮಾತಾಡಿದ್ದಾಳೆ. ಅತ್ಯಂಣತ ಜಾಣತನದಿಂದ ಉತ್ತರಿಸಿದ್ದರೂ ಕೂಡಾ ತಾನು ವರ್ಮಾನೊಂದಿಗೆ ಲವ್ವಲ್ಲಿ ಬಿದ್ದಿರೋದು ದಿಟವೆಂಬಂತೆ ಮಾತಾಡಿದ್ದಾಳೆ. ಅಲ್ಲಿಗೆ ಪಡ್ಡೆ ಹೈಕಳಲ್ಲಿ ಅಳಿದುಳಿದಿದ್ದ ಹೋಪ್ ಕೂಡಾ ನೆಗೆದು ಬಿದ್ದಂತಾಗಿದೆ. ಹಾಗೆ ನೋಡಿದರೆ ತಮನ್ನಾ ಯಾವುದೇ ರೀತಿಯಲ್ಲಿಯೂ ಹೆಸರು ಕೆಡಿಸಿಕೊಂಡವಳಲ್ಲ. ಯಾರೊಂದಿಗೂ ಅಫೇರಿನಂಥಾದ್ದನ್ನು ಇಟ್ಟುಕೊಳ್ಳದೆ, ತನ್ನ ತ್ವಜೆಯಷ್ಟೇ ಶುಭ್ರ ವ್ಯಕ್ತಿತ್ವವನ್ನೂ ಹೊಂದಿರುವಾಕೆ ತಮನ್ನಾ. ಆಕೆಯೇ ಒಪ್ಪಿಕೊಂಡಿರುವ ರೀತಿ ನೋಡಿದರೆ, ಇಷ್ಟರಲ್ಲಿಯೇ ವರ್ಮಾನೊಂದಿಗಿನ ಅಫೇರಿಗೆ ಅಧಿಕೃತ ಮುದ್ರೆ ಬಿದ್ದರೂ ಅಚ್ಚರಿಯೇನಿಲ್ಲ!